ಉದಯವಾಹಿನಿ, ರಾಮನಗರ: ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಮುಂದುವರೆದಿದ್ದು, ಕಾಡಾನೆ ದಾಳಿಗೆ ರೈತ ಬಲಿಯಾಗಿರುವ ಘಟನೆ ಹಾರೋಹಳ್ಳಿ ತಾಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಪುಟ್ಟಮಾದೇಗೌಡ (48) ಮೃತ ದುರ್ದೈವಿ. ಇಂದು ಮುಂಜಾನೆ ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಪರಿಣಾಮ ರೈತ ಮಾದೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬನ್ನೇರುಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಬಂದಿರುವ ಕಾಡಾನೆ ರಾತ್ರಿ ಇಡೀ ರೈತರ ಜಮೀನಿನಲ್ಲಿ ದಾಂಧಲೆ ನಡೆಸಿ ರಾಗಿ ಬೆಳೆ ಸಂಪೂರ್ಣ ನಾಶ ಮಾಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಅರಣ್ಯಾಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದಾರೆ. ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿರಂತರವಾಗಿ ಮುಂದುವರೆದಿದ್ದು, ಅರಣ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
