
ಉದಯವಾಹಿನಿ, ಲಕ್ನೋ: ಕನ್ವರ್ ಯಾತ್ರೆ ವೇಳೆ ವಿದ್ಯುತ್ ಸ್ಪರ್ಶಿಸಿ ಐವರು ಕನ್ವರ್ ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಭಾವನ್ಪುರದ ರಾಲಿ ಚೌಹಾನ್ ಗ್ರಾಮದಲ್ಲಿ ನಡೆದಿದೆ. ಶಿವನ ಅನುಯಾಯಿಗಳಾದ ಕನ್ವಾರಿಯಾಗಳ ಗುಂಪಿನ ನೇತೃತ್ವದ ಮೆರವಣಿಗೆಯು ಗಂಗಾ ನದಿಯ ಪವಿತ್ರ ನೀರಿನೊಂದಿಗೆ ಹರಿದ್ವಾರದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಡ ಸಂಭವಿಸಿದೆ. ಈ ಸಂಭ್ರಮದ ಸಂಗೀತದಿಂದ ತುಂಬಿದ ಕನ್ವಾರಿಯಾಗಳನ್ನು ಹೊತ್ತ ವಾಹನವು ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆ, ಕೆಳಮಟ್ಟದ ಹೈಟೆನ್ಷನ್ ಲೈನ್ ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಐವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.
ಇನ್ನೂ ಐದು ಜನರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಕನ್ವರ್ ಯಾತ್ರೆಯು ಭಾರತದಲ್ಲಿ ಮಹತ್ವದ ಧಾರ್ಮಿಕ ಸಭೆಯಾಗಿದ್ದು, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಛತ್ತೀಸ್, ಒಡಿಶಾ ಮತ್ತು ಜಾರ್ಖಂಡ್ನಂತಹ ರಾಜ್ಯಗಳಿಂದ ವಾರ್ಷಿಕವಾಗಿ ಅಂದಾಜು ೧೦ ರಿಂದ ೧೨ ಮಿಲಿಯನ್ ಜನರು ಈ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ.
