ಉದಯವಾಹಿನಿ, ಲಿಬಿಯಾ: ಪೋರ್ಚುಗಲ್‌ಗೆ ವಲಸೆ ಹೋಗಲು ಯತ್ನಿಸುತ್ತಿದ್ದ ಭಾರತೀಯ ದಂಪತಿ ಮತ್ತು ಅವರ ಮೂರು ವರ್ಷದ ಮಗಳನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಹರಣಾಕಾರರು ಅವರ ಬಿಡುಗಡೆಗೆ 2 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಈ ಕುಟುಂಬವು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಬಾದಲ್‌ಪುರ ಗ್ರಾಮದವರಾಗಿದ್ದು ; ಅವರನ್ನು ಕಿಸ್ಮತ್‌ಸಿನ್ಹ್ ಚಾವ್ಡಾ, ಅವರ ಪತ್ನಿ ಹೀನಾಬೆನ್ ಮತ್ತು ಮಗಳು ದೇವಾಂಶಿ ಎಂದು ಗುರುತಿಸಲಾಗಿದೆ.
ಕಿಸ್ಮತ್ಸಿನ್ಹ್ ಅವರ ಸಹೋದರ ವಾಸಿಸುವ ಪೋರ್ಚುಗಲ್‌ಗೆ ಹೋಗುತ್ತಿದ್ದಾಗ ಕುಟುಂಬವನ್ನು ಲಿಬಿಯಾದಲ್ಲಿ ಅಪಹರಿಸಲಾಯಿತು ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಸೋಲಂಕಿ ತಿಳಿಸಿದ್ದಾರೆ. ನವೆಂಬರ್ 29 ರಂದು ಗುಜರಾತ್‌ನ ಅಹಮದಾಬಾದ್‌ನಿಂದ ದುಬೈಗೆ ವಿಮಾನದಲ್ಲಿ ತೆರಳಿದ್ದರು. ಬಳಿಕ ಅಲ್ಲಿಂದ ಅವರು ಲಿಬಿಯಾದ ಬೆಂಗಾಜಿ ನಗರಕ್ಕೆ ಹೋದರು ಅಲ್ಲಿ ಅವರನ್ನು ಅಪಹರಿಸಲಾಯಿತು ಎಂದು ತಿಳಿದು ಬಂದಿದೆ. ಕುಟುಂಬವು ಯುರೋಪಿಯನ್ ರಾಷ್ಟ್ರದಲ್ಲಿ ನೆಲೆಸಲು ಬಯಸಿತ್ತು ಮತ್ತು ಪೋರ್ಚುಗಲ್ ಮೂಲದ ಏಜೆಂಟ್ ಸಹಾಯದಿಂದ ಪ್ರಯಾಣಿಸುತ್ತಿತ್ತು. ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಸೋಲಂಕಿ ತಿಳಿಸಿದ್ದಾರೆ.
