ಉದಯವಾಹಿನಿ, ನವದೆಹಲಿ: ಗೋವಾ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನೈಟ್‌ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರ ಗಡೀಪಾರು ಪ್ರಕ್ರಿಯೆಯನ್ನು ಸಿಬಿಐ ಆರಂಭಿಸಿದ್ದು, ನಾಳೆ ದೆಹಲಿಗೆ ಕರೆತರಲಾಗುತ್ತಿದೆ. ಗೋವಾ ಪೊಲೀಸರು ಕೂಡ ಇಂದು ದೆಹಲಿಗೆ ತೆರಳುತ್ತಿದ್ದು, ವಶಕ್ಕೆ ಪಡೆಯಲು ಸಿದ್ಧರಾಗಿದ್ದಾರೆ. ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಗೋವಾ ಪೊಲೀಸರು ಥೈಲ್ಯಾಂಡ್‌ಗೆ ತೆರಳುವುದಿಲ್ಲ. ಬದಲಿಗೆ ಲೂಥ್ರಾ ಸಹೋದರರಾದ ಸೌರಭ್ ಹಾಗೂ ಗೌರವ್ ಅನ್ನು ಭಾರತಕ್ಕೆ ಕರೆತರುತ್ತಿದ್ದು, ಮಂಗಳವಾರ ದೆಹಲಿಗೆ ತಲುಪಲಿದ್ದಾರೆ. ಇಬ್ಬರನ್ನು ದೆಹಲಿಗೆ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಗೋವಾ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಗೋವಾ ಪೊಲೀಸರು ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಅಂಜುನಾ ಪೊಲೀಸ್ ಠಾಣೆಗೆ ಕರೆದೊಯ್ಯಲಿದ್ದು, ಬಳಿಕ ಡಿ.17ರಂದು ಮಾಪುಸಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನೂ ಈಗಾಗಲೇ ಈ ಪ್ರಕರಣ ಸಂಬಂಧ ಗೋವಾ ಸರ್ಕಾರ ವಿಶೇಷ ತಂಡವನ್ನು ರಚಿಸಿದ್ದು, ಬಿಎನ್‌ಎಸ್‌ನ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಡಿ.6ರಂದು ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ, 25 ಜನರು ಸಾವನ್ನಪ್ಪಿದ್ದರು. ಈ ವೇಳೆ ಲೂಥ್ರಾ ಸಹೋದರರಿಬ್ಬರು ಥೈಲ್ಯಾಂಡ್‌ಗೆ ಪರಾರಿಯಾಗಿದ್ದರು. ವಿದೇಶಾಂಗ ಸಚಿವಾಲಯಕ್ಕೆ ಕ್ರಮ ಕೈಗೊಳ್ಳುವಂತೆ ಗೋವಾ ಸರ್ಕಾರ ವಿನಂತಿಸಿದ ಬಳಿಕ ಲೂಥ್ರಾ ಸಹೋದರರಿಬ್ಬರ ಪಾಸ್‌ಪೋರ್ಟ್ ರದ್ದುಗೊಳಿಸಲಾಯಿತು. ಬಳಿಕ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದ್ದು, ನಂತರ ಡಿ.11ರಂದು ಥಾಯ್ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದರು.
