ಉದಯವಾಹಿನಿ, ನವದೆಹಲಿ: ವೋಟ್ ಚೋರಿ ಹೆಸರಿನಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳಿನ ಸಂಕಥನ ಸೃಷ್ಟಿಸುತ್ತಿರುವ ಪ್ರತಿಪಕ್ಷಗಳು ಭವಿಷ್ಯದಲ್ಲಿ ಘೋರ ಪರಿಣಾಮ ಅನುಭವಿಸುತ್ತವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ವಾಗ್ದಾಳಿ ನಡೆಸಿದರು.
ರಾಜ್ಯಸಭೆಯಲ್ಲಿ ಈ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಕಥೆ ಪ್ರಚಾರ ಮಾಡುತ್ತಾ ಹೋದರೆ, ಮತದಾರರ ಮನಸ್ಸಿನಲ್ಲಿ ಅನುಮಾನ ಹುಟ್ಟುಹಾಕಿದರೆ ಅದರಿಂದ ಪ್ರತಿಪಕ್ಷಗಳಿಗೆ ಒಳ್ಳೆಯದಾಗುವುದಿಲ್ಲ. ಪ್ರತಿಪಕ್ಷಗಳು ಪ್ರಧಾನಿಯವರ ಬಗ್ಗೆ ಹಾದಿಬೀದಿಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಕೆಟ್ಟದ್ದಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ನಮ್ಮದು ಬೃಹತ್ ರಾಷ್ಟ್ರ. ಕಾಂಗ್ರೆಸ್ ಪಕ್ಷ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿರಬಹುದು. ಆದರೆ ನೆನಪಿನಲ್ಲಿಡಿ. ಹೀಗೆ ವೋಟ್ ಚೋರಿ ಪದ ಬಳಸುವುದರಿಂದ ಮುಂದಿನ ದಿನಗಳಲ್ಲಿ ನೀವೇ ತೊಂದರೆ ಅನುಭವಿಸುತ್ತೀರಿ. ನಿಮ್ಮ ಮನಸ್ಸಿಗೆ ಏನಾಗಿದೆ? ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಿ. ನಾನು ಏಳು ದಶಕಗಳಿಗೂ ಹೆಚ್ಚು ಕಾಲ ಚುನಾವಣೆಯಲ್ಲಿ ಸೋಲು ಗೆಲುವನ್ನು ಎದುರಿಸಿದ್ದೇನೆ. ಆದರೆ ನಾನು ಎಂದಿಗೂ ಮತಗಳ್ಳತನ ಮಾತೆತ್ತಿಲ್ಲ ಎಂದು ಹೇಳಿದರು.
ಕೇರಳದಲ್ಲಿ 18,000 ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಬರೆದ ಪತ್ರವನ್ನು ಉಲ್ಲೇಖಿಸಿದರು. ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ ನೆಹರು ಅವಧಿಯಲ್ಲಿಯೂ ಸಹ ಚುನಾವಣಾ ವ್ಯವಸ್ಥೆಯಲ್ಲಿ ಕೆಲವು ಲೋಪಗಳು ಇದ್ದವು. ಆದರೆ ಇದೀಗ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಪ್ರಸ್ತಾಪಿಸಿಯೂ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಬಿಹಾರ ಚುನಾವಣೆಯಲ್ಲಿ ಸೋಲು ಎದುರಿಸಿತು. ಮತದಾರರ ಪಟ್ಟಿಯ ಕೂಲಂಕಷ ಪರಿಶೀಲನೆಯ ನಂತರವೂ ಆ ರಾಜ್ಯದಲ್ಲಿ ಯಾಕೆ ಹೀಗಾಯಿತು ಎಂಬುದನ್ನು ಸ್ವತಃ ಪ್ರತಿಪಕ್ಷ ನಾಯಕರು ಆಲೋಚಿಸಬೇಕು ಎಂದು ಟೀಕಿಸಿದರು.
