ಉದಯವಾಹಿನಿ, ಬೆಂಗಳೂರು: ಬಹುನಿರೀಕ್ಷಿತ ಜವಳಿ ವಾಣಿಜ್ಯ ಪ್ರದರ್ಶನಗಳಿಗೆ ಬೆಂಗಳೂರು ಸಜ್ಜಾಗಿದೆ. ಫೆ.6, 7 ಮತ್ತು 8 ರಂದು ಎಫ್&ಎ ಶೋ (ಜವಳಿ ಮತ್ತು ಪರಿಕರಗಳ ವಾಣಿಜ್ಯ ಪ್ರದರ್ಶನ) ಹಾಗೂ ಎಎಸ್‌ಎಫ್ (ಸಿದ್ಧ ಉಡುಪು ಮೇಳವು) ವೈಟ್‌ಫೀಲ್ಡ್‌ನ ಕೆಟಿಪಿಒ ಟ್ರೇಡ್ ಸೆಂಟರ್‌ನ ಹಾಲ್ ಬಿನಲ್ಲಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಪ್ರಮುಖ ಮೇಳವು ಜವಳಿ ಉದ್ಯಮದ ವೃತ್ತಿಪರರಿಗೆ ಒಂದು ಉತ್ತಮ ವೇದಿಕೆಯಾಗಲಿದ್ದು, ಬಟ್ಟೆಗಳು, ಪರಿಕರಗಳು ಹಾಗೂ ಸಿದ್ಧ ಉಡುಪು ಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಒಂದೇ ಸೂರಿನಡಿ ವೀಕ್ಷಿಸುವ, ಖರೀದಿಸುವ ಅವಕಾಶ ವನ್ನು ಕಲ್ಪಿಸುತ್ತದೆ.
ಈ ಅವಳಿ ಪ್ರದರ್ಶನಗಳ ಉದ್ಘಾಟನಾ ಸಮಾರಂಭವು ಫೆ.6ರಂದು ಬೆಳಗ್ಗೆ 11 ಗಂಟೆಗೆ ಕೆಟಿಪಿಒ ಟ್ರೇಡ್ ಸೆಂಟರ್‌ನಲ್ಲಿ ನೆರವೇರಲಿದೆ. ಪಿವಿಎಚ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕರು, ಭಾರತೀಯ ಉಪಖಂಡದ ಹಬ್ ಲೀಡ್ ಆಗಿರುವ ಶ್ರೀಮತಿ ದೀಪ್ತಿ ಬೋಪಯ್ಯ ಹಾಗೂ ಮಿಂತ್ರಾ ಸಂಸ್ಥೆಯ ಸ್ಟ್ರಾಟೆಜಿಕ್ ಪಾಲುದಾರಿಕೆ ಹಾಗೂ ಒಮ್ನಿಚಾನೆಲ್‌ನ ಮುಖ್ಯಸ್ಥ ವೇಣು ನಾಯರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಅವರಿಗೆ ಉದ್ಯಮದ ಇತರೆ ಗಣ್ಯರು ಸಾಥ್ ನೀಡಲಿದ್ದಾರೆ.
ಕಳೆದ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಎಫ್&ಎ ಪ್ರದರ್ಶನ ಹಾಗೂ ಸಿದ್ಧ ಉಡುಪು ಗಳ ಮೇಳವು ಬೆಂಗಳೂರಿನ ಜವಳಿ ಹಾಗೂ ಸಿದ್ಧ ಉಡುಪುಗಳ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ವಾರ್ಷಿಕ ಸಂಗಮದ ತಾಣವಾಗಿದೆ. ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪಾಲುದಾರರು, ಉದ್ಯಮಿಗಳು ಇಲ್ಲಿ ನಿಯಮಿತವಾಗಿ ಭೇಟಿಯಾಗಿ, ಕಚ್ಚಾ ವಸ್ತುಗಳ ಬಗ್ಗೆ, ಹೊಸ ಟ್ರೇಂಡ್‌ಗಳ ಅನ್ವೇಷಣೆ, ಪಾಲುದಾರಿಕೆಗಳ ಸ್ಥಾಪನೆ ಮತ್ತು ಜಾಗತಿಕ ಫ್ಯಾಷನ್ ಉದ್ಯಮದಲ್ಲಿ ಮುಂದೆ ಬರುವ ಅವಕಾಶಗಳನ್ನು ಚರ್ಚಿಸಲು ಹಾಗೂ ಪಡೆಯಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.
