ಉದಯವಾಹಿನಿ, ಚೆನ್ನೈ: ಡಿಎಂಕೆ “ದುಷ್ಟ ಶಕ್ತಿ”, ತಮಿಳಗ ವೆಟ್ರಿ ಕಳಗಂ ಪಕ್ಷ “ಶುದ್ಧ ಮತ್ತು ನಿರ್ಮಲ ಶಕ್ತಿ” ಎಂದು ನಟ, ರಾಜಕಾರಣಿ ವಿಜಯ್ ಅವರು ಕರೂರು ದುರಂತದ ನಂತರ ತಮಿಳುನಾಡಿನಲ್ಲಿ ನಡೆಸಿದ ಮೊದಲ ಸಾರ್ವಜನಿಕ ಸಭೆಯಲ್ಲಿ ಆಡಳಿತಾರೂಢ ಡಿಎಂಕೆ (DMK) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಕೃಷಿ ಮತ್ತು ಸಂಸ್ಕೃತಿಯನ್ನು ಉಲ್ಲೇಖಿಸಿ ತಮ್ಮ ಭಾಷಣ ಆರಂಭಿಸಿದರು. ಈರೋಡು ಅರಿಶಿಣ ಉತ್ಪಾದನೆಗೆ ಹೆಸರುವಾಸಿ. ಒಳ್ಳೆಯ ಕಾರ್ಯ ಆರಂಭಿಸುವಾಗ ಅರಿಶಿಣ ಬಳಸುವುದು ಸಂಪ್ರದಾಯ ಎಂದು ಸಂಕೇತಿಸಿದರು. ಸುಮಾರು 34 ವರ್ಷಗಳಿಂದ ಸಿನಿಮಾ ಮೂಲಕ ಜನರೊಂದಿಗೆ ಸಂಪರ್ಕ ಹೊಂದಿರುವುದನ್ನು ನೆನಪಿಸಿಕೊಂಡ ವಿಜಯ್, ನಾನು ಎಲ್ಲವನ್ನೂ ಬಿಟ್ಟು ಬಂದಿದ್ದೇನೆ, ಜನರು ನನ್ನನ್ನು ಬಿಟ್ಟುಕೊಡುವುದಿಲ್ಲ. ನೀವು ತೋರಿದ ಬೆಂಬಲಕ್ಕೆ ಕೃತಜ್ಞತೆ ತಿಳಿಸಿದರು.
ಸಾಮಾಜಿಕ ಸುಧಾರಕ ಪೆರಿಯಾರ್ ಅವರು ಈರೋಡಿನ ಕಬ್ಬಿಣದ ಮನುಷ್ಯ. ಪೆರಿಯಾರ್ ತತ್ವಶಾಸ್ತ್ರೀಯ ಆಧಾರ ನೀಡಿದರೆ, ಅಣ್ಣಾ ಮತ್ತು ಎಂ.ಜಿ.ಆರ್ ಚುನಾವಣಾ ತಂತ್ರಗಳನ್ನು ನೀಡಿದರು. ಪೆರಿಯಾರ್ ಹೆಸರಿನಲ್ಲಿ ಲೂಟಿ ಮಾಡಬೇಡಿ. ಈ ರೀತಿಯ ಕೃತ್ಯಗಳನ್ನು ಟಿವಿಕೆಯ ರಾಜಕೀಯ ಹಾಗೂ ತಾತ್ವಿಕ ಶತ್ರುಗಳು ಮಾಡುತ್ತಾರೆ. ಡಿಎಂಕೆ ಸರ್ಕಾರ ಆಡಳಿತದಲ್ಲಿ ವಿಫಲಗೊಂಡಿದೆ. ನೀಟ್ ನಿಷೇಧ, ಶಿಕ್ಷಣ ಸಾಲ ಮನ್ನಾ ಮುಂತಾದ ಘೋಷಣೆಗಳು ಸುಳ್ಳು. ಅದಕ್ಕಾಗಿ ಡಿಎಂಕೆ ಹಾಗೂ ಸಮಸ್ಯೆಗಳು ಫೆವಿಕಾಲ್ ಹಾಕಿ ಒಂದಕ್ಕೊಂದು ಅಂಟಿಕೊಂಡಿವೆ ಎಂದು ವ್ಯಂಗ್ಯವಾಡಿದರು. ಅರಿಶಿಣ ಸಂಶೋಧನಾ ಕೇಂದ್ರಗಳ ಟೆಂಡರ್‌ಗಳ ಹೊರತಾಗಿಯೂ ರೈತರಿಗೆ ಲಾಭವಿಲ್ಲ, ಕಬ್ಬು-ಭತ್ತ ಖರೀದಿಯಲ್ಲಿ ಭ್ರಷ್ಟಾಚಾರ, ನದಿ ಸಂಪರ್ಕ ಯೋಜನೆಗಳ ವಿಫಲತೆ, ಮರಳು ಗಣಿಗಾರಿಕೆ ತಡೆಯದಿರುವುದು, ನೇಕಾರರ ಬಾಕಿ ಪಾವತಿ, ಎಂಎಸ್‌ಎಂಇಗಳಿಗೆ ದುಬಾರಿ ವಿದ್ಯುತ್ ದರಗಳಂತಹ ವಿಚಾರಗಳನ್ನು ಪ್ರಸ್ತಾಪಿಸಿದರು. ನಿರುದ್ಯೋಗ, ವಿದ್ಯಾರ್ಥಿ ಡ್ರಾಪ್‌ಔಟ್, ಮಹಿಳಾ ಸುರಕ್ಷತೆಯ ಕೊರತೆಯನ್ನೂ ಎತ್ತಿ ತೋರಿಸಿದರು. ತಮ್ಮ ಭಾಷಣಗಳನ್ನು “ಸಿನಿಮಾ ಡೈಲಾಗ್” ಎಂದು ಟೀಕಿಸುವವರಿಗೆ “ಭಾಷಣಕ್ಕೆ ಸಮಯದ ನಿಯಮವಿಲ್ಲ” ಎಂದು ಉತ್ತರಿಸಿದರು. ಮಾಜಿ ಸಚಿವ ಸೆಂಗೋಟ್ಟೈಯನ್ ಟಿವಿಕೆಗೆ ಸೇರ್ಪಡೆಯಾಗಿರುವುದು ದೊಡ್ಡ ಬಲ ಎಂದು ಹೇಳಿದ ಅವರು, ಇನ್ನಷ್ಟು ನಾಯಕರು ಸೇರಲಿದ್ದಾರೆ ಎಂದು ಸುಳಿವು ನೀಡಿದರು.
