ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿಯ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು `ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್’ನ ಅನುಮತಿ ಬೇಕೆನ್ನುವುದು ನಮ್ಮ ಅರಿವಿನಲ್ಲಿದೆ. ಇದಕ್ಕೆ 2033ರವರೆಗೂ ಕಾಲಾವಕಾಶವಿದೆ. ಹೀಗಾಗಿಯೇ, ದೂರದೃಷ್ಟಿ ಇಟ್ಟುಕೊಂಡು ಈಗಿನಿಂದಲೇ ಉಳಿದ ಕೆಲಸಗಳನ್ನು ನಾವು ಆರಂಭಿಸಿದ್ದೇವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ದೇವನಹಳ್ಳಿಯ ಸಮೀಪದಲ್ಲಿ ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಕ್ರಿಯವಾಗಿದೆ. ಇದು ಆರಂಭವಾಗುವಾಗಲೇ 2033ರವರೆಗೂ 150 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಬಾರದೆಂಬ ಷರತ್ತು ಇದೆ. ಏತನ್ಮಧ್ಯೆ ಹೊಸದೆಹಲಿ ಮತ್ತು ನವೀ ಮುಂಬೈಗಳಲ್ಲಿ ಇಂತಹ ಷರತ್ತುಗಳನ್ನು ಸಡಿಲಿಸಿ, ಎರಡನೆಯ ಏರ್‌ಪೋರ್ಟುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಸಂದರ್ಭ ನೋಡಿಕೊಂಡು ಬಗೆಹರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಒಂದು ವಿಮಾನ ನಿಲ್ದಾಣ ಆಗಬೇಕೆಂದರೆ ಸ್ಥಳದ ಆಯ್ಕೆ, ಅದರ ಪರಿಶೀಲನೆ, ಭೂಸ್ವಾಧೀನ, ಪರಿಹಾರ ವಿತರಣೆ ಮುಂತಾದ ಅಂಶಗಳು ಮುಖ್ಯವಾಗುತ್ತವೆ. ಇವೆಲ್ಲವನ್ನೂ ಮುಗಿಸಿಕೊಳ್ಳಲು ಏನಿಲ್ಲವೆಂದರೂ ಐದಾರು ವರ್ಷಗಳು ಬೇಕಾಗುತ್ತವೆ. ಜೊತೆಗೆ ಬಿಐಎಎಲ್ ಅನುಮತಿ ಬೇಕಾಗುವುದು ಇವೆಲ್ಲ ಮುಗಿದ ಮೇಲೆ ಇದೆಲ್ಲ ಸಾಧ್ಯ. ಹೀಗಾಗಿಯೇ ಈಗ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಸ್ಥಳದ ಅನುಕೂಲ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಯ ಉದ್ದೇಶಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.
