ಉದಯವಾಹಿನಿ, ಮುಂಬೈ : ಮಹಾರಾಷ್ಟ್ರದಲ್ಲಿರುವ ಯವತ್ನಾಳ್ ಎಂಬ ಸಣ್ಣ ಗ್ರಾಮದಲ್ಲಿ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 27 ಸಾವಿರ ಜನನ ನೋಂದಣಿಯಾಗಿರುವ ವಿಚಾರ ಇದೀಗ ಎಲ್ಲರನ್ನು ಅಚ್ಚರಿಗೆ ದೂರಿದೆ. ವಿಶೇಷವೆಂದರೆ ಈ ಗ್ರಾಮದ ಜನಸಂಖ್ಯೆ ಕೇವಲ 15 ಸಾವಿರ. ಈ ವಿಚಾರವೀಗ ಅಧಿಕಾರಿಗಳ ನಿದ್ದೆಗೆಡಿಸಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಈ ಘಟನೆಯನ್ನು ರಾಜ್ಯದಲ್ಲಿ ನಡೆದಿರುವ ಅತೀ ದೊಡ್ಡ ಜನನ ದಾಖಲಾತಿ ಹಗರಣವೆಂದು ಪರಿಗಣಿಸಲಾಗಿದೆ.
2025ರ ಸೆಪ್ಟೆಂಬರ್ ಮತ್ತು ನವಂಬರ್ ತಿಂಗಳಿನಲ್ಲಿ ಶೆಂಡುರುಸಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಶೇಷ ಪರಿಷ್ಕರಣಾ ತಪಾಸಣೆಯನ್ನು ಕೈಗೊಂಡ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಜನನ ಮತ್ತು ಮರಣ ದಾಖಲಾತಿಯಲ್ಲಿ ವಿಳಂಬ ಕಂಡುಬಂದ ಸಂದರ್ಭದಲ್ಲಿ ಸಂಶಯಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಈ ಶಾಕಿಂಗ್ ವಿಚಾರ ಗೊತ್ತಾಗಿದೆ. ಪ್ರಾರಂಭದಲ್ಲಿ ಇದನ್ನು ಕಣ್ತಪ್ಪಿನಿಂದಾಗಿರುವ ಕ್ಲೆರಿಕಲ್ ಎರರ್ ಎಂದು ಪರಿಗಣಿಲಾಗಿತ್ತು. ಆದರೆ ಬಳಿಕ ಇದರ ಬಗ್ಗೆ ವಿಸ್ತೃತ ತನಿಖೆಗಿಳಿದ ಸಂದರ್ಭದಲ್ಲಿ ಇದೊಂದು ದೊಡ್ಡ ಮಟ್ಟದ ಸೈಬರ್ ವಂಚನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಪ್ರಾರಂಭಿಕ ತನಿಖೆಯಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಶೆಂಡೂರುಸಾನಿ ಗ್ರಾಮ ಪಂಚಾಯತ್‌ನ ಸಿ.ಆರ್.ಎಸ್. ಲಾಗಿನ್ ವಿವರಗಳು ಸೋರಿಕೆಯಾಗಿರುವುದು ಕಂಡುಬಂದಿದೆ. ಇಲ್ಲಿನ ಸಿ.ಆರ್.ಎಸ್. ಐಡಿ ಮುಂಬೈನಲ್ಲಿ ಮ್ಯಾಪ್ ಆಗಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರ ಪ್ರಕಾರ ಇಲ್ಲಿನ ಜನನ, ಮರಣ ದಾಖಲಾತಿಗಳನ್ನು ಬೇರೊಂದು ಕಡೆಯಿಂದ ಎಂಟ್ರಿ ಮಾಡುತ್ತಿದ್ದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಇದು ಸ್ಥಳೀಯ ವ್ಯಾಪ್ತಿ ಮತ್ತು ಪರಿಷ್ಕರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಸಾವಿರಾರು ನಕಲಿ ಜನನ ನೋಂದಾವಣಿಗಳನ್ನು ಸಿಸ್ಟಮ್‌ಗೆ ಅಪ್‌ಲೋಡ್‌ ಮಾಡಿರುವುದು ಪತ್ತೆಯಾಗಿದ್ದು, ಬೃಹತ್ ಹಗರಣದ ವಾಸನೆ ಅಧಿಕಾರಿಗಳ ಮೂಗಿಗೆ ಬಡಿಯುವಂತೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!