ಉದಯವಾಹಿನಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕತ್ವದ ಜಾರ್ಖಂಡ್, ಹರಿಯಾಣವನ್ನು ಸೋಲಿಸಿ ಚೊಚ್ಚಲ ಚಾಂಪಿಯನ್ ಆಯಿತು. ಉಭಯ ತಂಡಗಳು ಮೊದಲ ಬಾರಿ ಟೂರ್ನಿಯ ಫೈನಲ್ ಪ್ರವೇಶಿಸಿದ್ದವು. ಅಬ್ಬರಿಸಿದ ನಾಯಕ ಇಶಾನ್ ಕಿಶನ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 10 ಸಿಕ್ಸರ್‌ಗಳೊಂದಿಗೆ ಬರೋಬ್ಬರಿ 101 ರನ್ ಚಚ್ಚಿದರು. ಅವರ ಸ್ಪೋಟಕ ಶತಕದ ಬಲದಿಂದ ಜಾರ್ಖಂಡ್ 69 ರನ್‌ಗಳ ಭರ್ಜರಿ ಜಯ ದಾಖಲಿಸಿತು. ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಇಶಾನ್ ಕಿಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರ ನಡುವೆ ಇಶಾನ್ ಕಿಶನ್ ಅವರು ಎಂಎಸ್ ಧೋನಿಯವರ ವಿಶೇಷ ದಾಖಲೆಯೊಂದನ್ನು ಮುರಿದಿದ್ದಾರೆ.
ಇಶಾನ್ ಕಿಶನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ 10 ಪಂದ್ಯಗಳಲ್ಲಿ 57.44ರ ಸರಾಸರಿ ಮತ್ತು 197.32ರ ಸ್ಟ್ರೈಕ್ ರೇಟ್‌ನೊಂದಿಗೆ 517 ರನ್ ಕಲೆಹಾಕಿದ್ದಾರೆ. ಇದರಲ್ಲಿ ಎರಡು ಶತಕ, 51 ಬೌಂಡರಿ ಹಾಗೂ 33 ಸಿಕ್ಸರ್‌ಗಳು ಒಳಗೊಂಡಿವೆ. ಈ ಮೂಲಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ವೊಬ್ಬರು ದೇಶಿ ಹಾಗೂ ಅಂತಾರಾಷ್ಟ್ರೀಯ ಟೂರ್ನಿ ಸೇರಿದಂತೆ ಯಾವುದೇ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲೆ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ಅವರ ಹೆಸರಿನಲ್ಲಿತ್ತು.
