ಉದಯವಾಹಿನಿ , ಚೆನ್ನೈ: ಚುನಾವಣಾ ಆಯೋಗವು ತಮಿಳುನಾಡಿನ ಕರಡು ಮತದಾರರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ಬರೋಬ್ಬರಿ 97 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟಿದೆ. ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ನಡೆಸಿದ ನಂತರ, ತಮಿಳುನಾಡು ಕರಡು ಮತದಾರರ ಪಟ್ಟಿಯಲ್ಲಿ ಈಗ 5,43,76,755 ಮತದಾರರು ಉಳಿದಿದ್ದಾರೆ. ಇದರಲ್ಲಿ 2.66 ಕೋಟಿ ಮಹಿಳೆಯರು ಮತ್ತು 2.77 ಕೋಟಿ ಪುರುಷರು ಇದ್ದಾರೆ ಎಂದು ತಮಿಳುನಾಡು ಮುಖ್ಯ ಚುನಾವಣಾ ಅಧಿಕಾರಿ ಅರ್ಚನಾ ಪಟ್ನಾಯಕ್ ತಿಳಿಸಿದ್ದಾರೆ. ಎಸ್‌ಐಆರ್‌ಗೆ ಮೊದಲು, ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಸುಮಾರು 6.41 ಕೋಟಿ ನೋಂದಾಯಿತ ಮತದಾರರಿದ್ದರು. ಈ ಪ್ರಕ್ರಿಯೆಯಿಂದಾಗಿ 97,37,832 ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೈಬಿಟ್ಟ ಹೆಸರುಗಳಲ್ಲಿ ಮರಣ ಹೊಂದಿದ 26.94 ಲಕ್ಷ ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡ ಅಥವಾ ವಲಸೆ ಬಂದ 66.44 ಲಕ್ಷ ಮತದಾರರು, ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ವ್ಯಕ್ತಿಗಳು ನೋಂದಾಯಿಸಿಕೊಂಡಿರುವ 3,39,278 ನಕಲಿ ನಮೂದುಗಳು ಸೇರಿವೆ.

ರಾಜ್ಯಾದ್ಯಂತ ಮೂರು ಸುತ್ತಿನ ಮನೆ-ಮನೆ ಪರಿಶೀಲನೆ ನಡೆಸಲಾಗಿದೆ ವಲಸೆ ಬಂದವರೆಂದು ಗುರುತಿಸಲಾದವರಲ್ಲಿ, 66,44,881 ಜನರು ತಮ್ಮ ನೋಂದಾಯಿತ ವಿಳಾಸಗಳಲ್ಲಿ ವಾಸಿಸುತ್ತಿಲ್ಲ ಎಂಬುದು ಗೊತ್ತಾಗಿದೆ ಎಂದು ಪಟ್ನಾಯಕ್ ತಿಳಿಸಿದ್ದಾರೆ. ಡಿಎಂಕೆ ಆಡಳಿತದ ರಾಜ್ಯದಲ್ಲಿ ಎಸ್‌ಐಆರ್ ಅನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ತೀವ್ರ ವಿರೋಧದ ನಡುವೆಯೂ ನಡೆಸಲಾಯಿತು. ದಕ್ಷಿಣ ರಾಜ್ಯದಲ್ಲಿ ನಡೆದ ಪ್ರಮುಖ ರೋಲ್-ರಿವಿಷನ್ ವಿರುದ್ಧ ಡಿಎಂಕೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ತಡೆಯಲು, ನಾವು ಸರ್ವಪಕ್ಷ ಸಭೆ ಕರೆದು SIR ಅನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ್ದೇವೆ. ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮತದಾರರ ಪಟ್ಟಿಯ ಸಂಪೂರ್ಣ ಪರಿಷ್ಕರಣೆಯನ್ನು ಕೈಗೊಳ್ಳುವ ಚುನಾವಣಾ ಆಯೋಗದ ನಿರ್ಧಾರವು ಕಾನೂನುಬದ್ಧ ಮತದಾರರನ್ನು ಕೈಬಿಡುವ ಯೋಜಿತ ತಂತ್ರದ ಭಾಗವಾಗಿದೆ ಎಂದು ಸಿಎಂ ಎಂ.ಕೆ.ಸ್ಟಾಲಿನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!