ಉದಯವಾಹಿನಿ , ಢಾಕಾ: ಬಾಂಗ್ಲಾದೇಶದ ಮೈಮನ್‌ಸಿಂಗ್ ಜಿಲ್ಲೆಯ ಭಾಲುಕಾ ಪ್ರದೇಶದಲ್ಲಿ ನಡೆದ ಹಿಂದೂ ಯುವಕನ ಕ್ರೂರ ಹತ್ಯೆ ಪ್ರಕರಣ ಸಂಬಂಧ 7 ಮಂದಿಯನ್ನ ಬಂಧಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ದೃಢಪಡಿಸಿದ್ದಾರೆ. ದೀಪು ಚಂದ್ರ ದಾಸ್ ಎನ್ನುವ ಗಾರ್ಮೆಂಟ್ ಕಾರ್ಖಾನೆ ಕಾರ್ಮಿಕನನ್ನ ಗುರುವಾರ ರಾತ್ರಿ ಸ್ಥಳೀಯರ ಗುಂಪೊಂದು ಥಳಿಸಿ ಕೊಂದಿತ್ತು. ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದನೆಂದು ಆರೋಪಿಸಿ ಸ್ಥಳೀಯ ನಿವಾಸಿಗಳ ಗುಂಪು ಹತ್ಯೆ ಮಾಡಿತ್ತು. ಬಳಿಕ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರ‍್ಯಾಪಿಡ್ ಆಕ್ಷನ್ ಬೆಟಾಲಿಯನ್ (RAB) ವಿಶೇಷ ಕಾರ್ಯಾಚರಣೆ ನಡೆಸಿ ವಿವಿಧೆಡೆಗಳಿಂದ 7 ಆರೋಪಿಗಳನ್ನು ಬಂಧಿಸಿದೆ. ಬಂಧಿತರಲ್ಲಿ ಮೊಹಮ್ಮದ್ ಲಿಮೋನ್ ಸೊರ್ವಾರ್ (19), ಮೊಹಮ್ಮದ್ ತಾರೆಕ್ ಹುಸೇನ್, ಮೊಹಮ್ಮದ್ ಮಾನಿಕ್ ಮಿಯಾ (20), ಇರ್ಶಾದ್ ಅಲಿ (39), ನಿಜುಮ್ ಉದ್ದೀನ್ (2೦), ಅಲಮ್‌ಗೀರ್ ಹುಸೇನ್ (38) ಮತ್ತು ಮೊಹಮ್ಮದ್ ಮಿರಾಜ್ ಹುಸೇನ್ ಅಕೋನ್ (47) ಸೇರಿದ್ದಾರೆ. ತನಿಖೆ ಮುಂದುವರಿದಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಈ ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಯೂನಸ್ ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೂರ್ಣ ಬದ್ಧವಾಗಿದೆ. ತಪ್ಪಿತಸ್ಥರನ್ನ ನ್ಯಾಯದ ಮುಂದೆ ತರಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಾರೆ. ಈ ಘಟನೆ ಮಾನವತೆಗೆ ವಿರೋಧವಾದ ಅಪರಾಧ ಮಾತ್ರವಲ್ಲ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
