ಉದಯವಾಹಿನಿ , ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಷ್ರಾ ಬಿಬಿಗೆ ತೋಷಖಾನ-2 ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ತಲಾ 17 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಇಮ್ರಾನ್ ಖಾನ್ ಪ್ರಸ್ತುತ ಇರುವ ಅಡಿಯಾಲಾ ಜೈಲಿನೊಳಗೆ ನಡೆದ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಸೆಂಟ್ರಲ್ ಶಾರುಖ್ ಅರ್ಜುಮಂಡ್ ಅವರು ತೀರ್ಪು ಪ್ರಕಟಿಸಿದ್ದಾರೆ. ರಾಜ್ಯದ ಉಡುಗೊರೆಗಳಿಗೆ ಸಂಬಂಧಿಸಿದಂತೆ ಅಧಿಕಾರ ದುರುಪಯೋಗ ಮತ್ತು ನಂಬಿಕೆ ದ್ರೋಹ ಆರೋಪಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಕೋರ್ಟ್‌ ತೀರ್ಪು ನೀಡಿದೆ.
ಇಮ್ರಾನ್‌ ಖಾನ್‌ ಮತ್ತು ಪತ್ನಿಗೆ ಪಾಕಿಸ್ತಾನ ದಂಡ ಸಂಹಿತೆ ಸೆಕ್ಷನ್‌ 34 ಮತ್ತು 409ರ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತು. ಇನ್ನೂ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್‌ 5(2) ಅಡಿಯಲ್ಲಿ ಹೆಚ್ಚುವರಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದೇ ಕಾನೂನು ನಿಬಂಧನೆಗಳ ಅಡಿಯಲ್ಲಿ ಬುಷ್ರಾ ಬಿಬಿಗೂ 17 ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಇದರೊಂದಿಗೆ ಇಬ್ಬರಿಗೂ ತಲಾ 16.4 ಮಿಲಿಯನ್‌ ಪಾಕಿಸ್ತಾನಿ ರೂಪಾಯಿ (52.39 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ವಿಧಿಸಲು ವಿಫಲವಾದ್ರೆ ಮತ್ತಷ್ಟು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಏನಿದು ತೋಶಖಾನ ಕೇಸ್‌?: ತೋಷಖಾನ ಸರ್ಕಾರದ ಖಜಾನೆಯಾಗಿದ್ದು, ಸರ್ಕಾರಕ್ಕೆ ಬಂದ ಕಾಣಿಕೆಗಳನ್ನ ನಿರ್ವಹಣೆ ಮಾಡುತ್ತದೆ. 1974ರಲ್ಲಿ ತೋಶಖಾನ ಇಲಾಖೆಯನ್ನ ಸ್ಥಾಪಿಸಲಾಯಿತು. ಭಾರತ ಸೇರಿದಂತೆ ಅನೇಕ ದೇಶಗಳು ತೋಶಖಾನಗಳನ್ನ ಹೊಂದಿವೆ. ಅಲ್ಲಿ ಇದನ್ನು ವಿದೇಶಾಂಗ ಸಚಿವಾಲಯ ನಿರ್ವಹಿಸುತ್ತದೆ. ಉಡುಗೊರೆಗಳನ್ನು ದೇಶದ ಆಸ್ತಿ ಎಂದು ಭಾವಿಸಲಾಗುತ್ತದೆ. ಸದ್ಯ ಇಮ್ರಾನ್‌ ಖಾನ್‌ ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಬಂದ ಉಡುಗೊರೆಗಳನ್ನು ಈ ತೋಶಖಾನ ನಿಧಿಗೆ ನೀಡಬೇಕಿತ್ತು. ಆದ್ರೆ ಖಾನ್‌ ಅದನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಖಾನ್ ಅವರು 2018ರ ನವೆಂಬರ್‌ನಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಂದ ಪಡೆದ ನಾಲ್ಕು ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!