ಉದಯವಾಹಿನಿ , ದುಬೈ: ಅಬುಧಾಬಿಯಂತಹ ಪ್ರಮುಖ ಪ್ರದೇಶಗಳು ಸೇರಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡವು. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಜನರನ್ನು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಯಿತು. ಹೀಗಾಗಿ ಜನಜೀವನ ಸ್ತಬ್ಧಗೊಂಡಿತು. ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಅಪರೂಪಕ್ಕೆ ಮಾತ್ರ ಈ ರೀತಿ ಮಳೆ ಸುರಿಯುತ್ತದೆ. ಕಳೆದ ವರ್ಷ, 2024ರಲ್ಲಿ ಇದೇ ರೀತಿಯ ತೀವ್ರವಾದ ಮಳೆಯಿಂದಾಗಿ ದುಬೈ ಮತ್ತು ಅಬುಧಾಬಿಯ ಕೆಲವು ಭಾಗಗಳು ಜಲಾವೃತವಾಗಿದ್ದವು.
ದುಬೈನಲ್ಲಿ ಭಾರಿ ಮಳೆಯಾಗಿದ್ದು, ರಾಜಧಾನಿ ಅಬುಧಾಬಿಯಲ್ಲಿ ರಾತ್ರಿಯಿಡೀ ಬಿರುಗಾಳಿ ಬೀಸಿತು. ಶುಕ್ರವಾರ ಬೆಳಗ್ಗೆಯ ಹೊತ್ತಿಗೆ, ಹಲವಾರು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ವರದಿಯಾಗಿದೆ. ಉತ್ತರ ಎಮಿರೇಟ್ಸ್‌ನಲ್ಲಿ, ಭಾರಿ ನೀರು ನಿಂತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಹೀಗಾಗಿ ಅಂತಹ ಪ್ರದೇಶಗಳಿಗೆ ಹೋಗದಂತೆ ವಾಹನ ಸವಾರರಿಗೆ ಅಧಿಕಾರಿಗಳು ಸೂಚಿಸಿದರು.
ದುಬೈ ಸರ್ಕಾರವು ಎಲ್ಲಾ ಸರ್ಕಾರಿ ನೌಕರರನ್ನು ದೂರದಿಂದಲೇ ಕೆಲಸ ಮಾಡಲು ನಿರ್ದೇಶಿಸಿದರೆ, ಖಾಸಗಿ ಕಂಪನಿಗಳು ಕೂಡ ಇದನ್ನು ಅನುಸರಿಸುವಂತೆ ಸಲಹೆ ನೀಡಲಾಯಿತು. ಹೊರಗೆ ಹೋಗುವ ಅಗತ್ಯವಿಲ್ಲದಿದ್ದರೆ ಮನೆಯಲ್ಲೇ ಉಳಿಯುವಂತೆ ಅಬುಧಾಬಿಯ ಜನರಲ್ಲಿ ಅಧಿಕಾರಿಗಳು ಕೇಳಿಕೊಂಡರು. ಮುನ್ನೆಚ್ಚರಿಕೆಯಾಗಿ ಸಾರ್ವಜನಿಕ ಉದ್ಯಾನವನಗಳು ಮತ್ತು ಪ್ರವಾಸಿ ಸ್ಥಳಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.
