ಉದಯವಾಹಿನಿ , ಢಾಕಾ : ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಮೈಮೆನ್ಸಿಂಗ್ ಎಂಬಲ್ಲಿ ಹಿಂದು ಯುವಕನನ್ನು ಮರಕ್ಕೆ ನೇಣು ಹಾಕಿ ಕೊಂದು, ನಂತರ ಆತನ ದೇಹವನ್ನು ಹೆದ್ದಾರಿಯ ಮೇಲೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ.ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಮಧ್ಯಂತರ ಸರ್ಕಾರವು, ಧರ್ಮನಿಂದನೆ ಆರೋಪದಲ್ಲಿ ಹಿಂದು ಯುವಕನನ್ನು ಗುಂಪುಹತ್ಯೆ ಮಾಡಿದ ಪ್ರಕರಣದಲ್ಲಿ ಏಳು ಜನ ಶಂಕಿತರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿದ್ದ ದೀಪು ಚಂದ್ರ ದಾಸ್ (25 ವರ್ಷ) ಎಂಬ ಹಿಂದು ವ್ಯಕ್ತಿ ಅಲ್ಲಿನ ಸಿಬ್ಬಂದಿ ಜೊತೆಗಿನ ಕಿತ್ತಾಟದಲ್ಲಿ ಧರ್ಮನಿಂದನೆ ಮಾಡಿದ ಆರೋಪವಿತ್ತು. ಈ ವೇಳೆ ರೊಚ್ಚಿಗೆದ್ದು ಜನರು ಆತನನ್ನು ಎಳೆತಂದು ಕಾರ್ಖಾನೆಯ ಹೊರಗೆ ಥಳಿಸಿ ಮರಕ್ಕೆ ನೇತು ಹಾಕಿದ್ದರು. ನಂತರ ಉದ್ರಿಕ್ತ ಗುಂಪು ಮೃತದೇಹವನ್ನು ಢಾಕಾ-ಮೈಮೆನ್ಸಿಂಗ್ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿ ಸುಟ್ಟುಹಾಕಿದೆ. ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಪರೀಕ್ಷೆಗಾಗಿ ಸ್ಥಳೀಯ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೊಹಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಈ ಕೃತ್ಯವನ್ನು ಖಂಡಿಸಿದೆ. ದೇಶದಲ್ಲಿ ಇಂತಹ ಹಿಂಸಾಚಾರಕ್ಕೆ ಅವಕಾಶವಿಲ್ಲ. ಈ ಘೋರ ಅಪರಾಧದಲ್ಲಿ ಭಾಗಿಯಾದವರನ್ನು ಶಿಕ್ಷಿಸಲಾಗುವುದು ಎಂದು ತಿಳಿಸಿತ್ತು. ಇದೀಗ, 7 ಮಂದಿಯನ್ನು ಬಂಧಿಸಿದೆ.ಇಂದು ಷರೀಫ್ ಹಾದಿ ಅಂತ್ಯಕ್ರಿಯೆ: ಇನ್ನೊಂದೆಡೆ, ಬಾಂಗ್ಲಾದೇಶದ ಯುವ ಹೋರಾಟಗಾರ ಷರೀಫ್ ಉಸ್ಮಾನ್ ಹಾದಿಯ ಅಂತ್ಯಕ್ರಿಯೆ ಇಂದು ಸಂಸತ್ ಕಟ್ಟಡದ ದಕ್ಷಿಣ ಪ್ಲಾಜಾದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಪ್ರಕಟಿಸಿದೆ.
