
ಉದಯವಾಹಿನಿ, ಕಿಂಶಾಸ : ಇತ್ತೀಚೆಗಷ್ಟೇ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ರದ್ದಾಗಿ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಇದೀಗ ಏರ್ ಕಾಂಗೋ ವಿಮಾನದ ಬೇಜವಾಬ್ದಾರಿಯಿಂದ ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿಂಡು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಸೂಕ್ತ ಸೌಕರ್ಯವಿಲ್ಲದ ಕಾರಣ ಫ್ಲೈಟ್‌ನಿಂದ ಜಿಗಿದು ಹೊರಬಂದಿದ್ದಾರೆ. ಮನಿಯೆಮಾ ಪ್ರಾಂತ್ಯದಲ್ಲಿರುವ ಕಿಂಡು ವಿಮಾನ ನಿಲ್ದಾಣವು ಪ್ರಮುಖ ಪ್ರಾದೇಶಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಇದು ಸೀಮಿತ ಮೂಲ ಸೌಕರ್ಯದಿಂದ ಬಳಲುತ್ತಿದೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೊವೊಂದು ಭಾರಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಪ್ರಾರಂಭವಾದ ‘ಏರ್ ಕಾಂಗೋ’ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸಿದವರು ಕಿಂಡು ವಿಮಾನದಲ್ಲಿ ನಿಲ್ದಾಣದಲ್ಲಿ ಪರದಾಡಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಯಾಣಿಕರಿಗೆ ಇಳಿಯಲು ಬೇಕಾದ ಮೆಟ್ಟಿಲುಗಳ ವ್ಯವಸ್ಥೆಯನ್ನು ಮಾಡಲು ವಿಮಾನ ನಿಲ್ದಾಣದ ಸಿಬ್ಬಂದಿ ವಿಫಲರಾಗಿದ್ದಾರೆ. ಹೀಗಾಗಿ ಎರಡು ಗಂಟೆಗೂ ಹೆಚ್ಚು ಕಾಲ ವಿಮಾನದ ಒಳಗೆಯೇ ಪ್ರಯಾಣಿಕರು ಕಾಯಬೇಕಾಯಿತು. ಕೊನೆಗೆ ಬೇರೆ ದಾರಿ ಕಾಣದೆ, ವಿಮಾನದ ಬಾಗಿಲಿನಿಂದ ಸುಮಾರು 5ರಿಂದ 6 ಅಡಿ ಎತ್ತರದಿಂ ರನ್ ವೇ ಪಕ್ಕದ ನೆಲ ಮೇಲೆ ಒಬ್ಬೊಬ್ಬರಾಗಿ ಪ್ರಯಾಣಿಕರು ಜಿಗಿದಿದ್ದಾರೆ. ಈ ದೃಶ್ಯದ ವಿಡಿಯೊ ಸದ್ಯ ಭಾರೀ ವೈರಲ್ ಆಗಿದೆ. ವೃದ್ಧರು ಮತ್ತು ಅನಾರೋಗ್ಯ ಪೀಡಿತರು ಅಷ್ಟು ಎತ್ತರದಿಂದ ಜಿಗಿಯುವುದು ಅತ್ಯಂತ ಅಪಾಯಕಾರಿಯಾಗಿದ್ದು, ವಿಮಾನಯಾನ ಸಂಸ್ಥೆಯ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಕಿಂಡು ವಿಮಾನ ನಿಲ್ದಾಣವು ಪ್ರಾದೇಶಿಕವಾಗಿ ಉತ್ತಮವಾಗಿದ್ದರೂ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
