
ಉದಯವಾಹಿನಿ, ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿಯ ಅಂತ್ಯಕ್ರಿಯೆಯು ಬಿಗಿ ಭದ್ರತೆಗಳೊಂದಿಗೆ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಅಂತ್ಯಕ್ರಿಯೆಗೆ ಪೂರ್ವ ಸಿದ್ಧತೆಯ ಭಾಗವಾಗಿ ರಾಜಧಾನಿಯಾದ್ಯಂತ ಪೊಲೀಸ್ ಮತ್ತು ಅರೆಸೇನಾಪಡೆಗಳನ್ನ ನಿಯೋಜಿಸಲಾಗಿತ್ತು. ಯಾವುದೇ ಹಿಂಸಾಚಾರಕ್ಕೆ ಆಸ್ಪದ ನೀಡದೇ ಶಾಂತಿಯುತವಾಗಿ ಅಂತ್ಯಕ್ರಿಯೆ ನಡೆಯಿತು.
ಹಾದಿಯ ಹಿರಿಯ ಸಹೋದರ ಅಬು ಬಕರ್ ಜನಾಜಾ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಇದಾದ ತಕ್ಷಣ, ಪಾರ್ಥೀವ ಶರೀರವನ್ನ ಬಿಗಿ ಭದ್ರತೆಯಲ್ಲಿ ಢಾಕಾ ವಿಶ್ವವಿದ್ಯಾಲಯದ ಆವರಣಕ್ಕೆ ಕರೆದೊಯ್ಯಲಾಯಿತು. ಬಾಂಗ್ಲಾದೇಶದ ರಾಷ್ಟ್ರಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಸಮಾಧಿಯ ಪಕ್ಕದಲ್ಲಿ ಉಸ್ಮಾನ್‌ಗೆ ಸಮಾಧಿ ಅಗೆಯಲಾಗಿತ್ತು. ಪಾರ್ಥೀವ ಶರೀರ ಬರುತ್ತಿದ್ದಂತೆ ಅಂತ್ಯಕ್ರಿಯೆ ಸುಸೂತ್ರವಾಗಿ ಸಾಗಿತು.
ಇನ್ನೂ ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅಂತ್ಯಕ್ರಿಯೆ ಮೆರವಣಿಗೆ ವೇಳೆ ಸರ್ಕಾರದ ಮುಖ್ಯಸ್ಥ ಯೂನಸ್ ವಿದಾಯ ಭಾಷಣ ಮಾಡಿದರು. ಹಾದಿ ಅವರ ಪರಂಪರೆ ಉಳಿಯುತ್ತದೆ. ಅವರ ಆದರ್ಶಗಳನ್ನ ಎತ್ತಿಹಿಡಿಯಲಾಗುತ್ತದೆ. ಹಾದಿಯ ಒಂದು ಹನಿ ರಕ್ತವೂ ವ್ಯರ್ಥವಾಗೋದಿಲ್ಲ. ಇಂದು ನೀವೆಲ್ಲ ಯಾವುದಕ್ಕಾಗಿ ನಿಂತಿದ್ದೀರೋ ಅದನ್ನ ನಾವು ಪೂರೈಸುತ್ತೇವೆ ಎಂದು ಭರವಸೆ ನೀಡಿದರು.
ಬಾಂಗ್ಲಾದೇಶ ವಿದ್ಯಾರ್ಥಿ ದಂಗೆಯ ನೇತೃತ್ವವಹಿಸಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ, ಕಳೆದ ವಾರ ಮುಸುಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಹಾದಿ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹಾದಿ ಮೃತಪಟ್ಟರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ಪದಚ್ಯುತಿಗೊಳಿಸುವ ಹೋರಾಟದಲ್ಲಿ ಉಸ್ಮಾನ್ ಹಾದಿಯ ಪಾತ್ರ ಬಹಳ ದೊಡ್ಡದಿತ್ತು.
