ಉದಯವಾಹಿನಿ,ಚಿತ್ರದುರ್ಗ: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಅತ್ಯವಶ್ಯಕವಾಗಿದ್ದು, ಜಿಲ್ಲೆಯಲ್ಲಿ ಆಧಾರ್ ನೋಂದಣಿ ಹಾಗೂ  ದಾಖಲಾತಿ ನವೀಕರಣಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಸೂಚನೆ ಅಧಿಕಾರಿಗಳಿಗೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಮಟ್ಟದ ಆಧಾರ್ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆಧಾರ್ ನೋಂದಣಿ, ದಾಖಲಾತಿ ನವೀಕರಣ ಕಡಿಮೆಯಾಗಿರುವ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ನೋಂದಣಿ ಹಾಗೂ ದಾಖಲಾತಿ ನವೀಕರಣ ಪ್ರಕ್ರಿಯೆ ಕೈಗೊಳ್ಳಬೇಕು. ಹೆಚ್ಚಿನ ಜನಸಂಖ್ಯೆ ಹಾಗೂ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಿಂದ ದೂರವಿರುವ ಗ್ರಾಮಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿವಾಗಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಬೇಕು. ಜಿಲ್ಲೆಯ ಜನರಿಗೆ ಆಧಾರ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು. ಖಾಯಿಲೆ, ಅಪಘಾತ ಇನ್ನಿತರೆ ಕಾರಣಗಳಿಂದ ಮನೆಯಲ್ಲಿ ಹಾಸಿಗೆಹಿಡಿದವರನ್ನು ಆಧಾರ್ ಕೇಂದ್ರಗಳಿಗೆ ಕರೆತರುವುದು ಕಷ್ಟಸಾಧ್ಯ. ಆಧಾರ್ ಕಾರ್ಡ್ ಇಲ್ಲದಿದ್ದರೆ ಸರ್ಕಾರ ವಿವಿಧ ಯೋಜನೆಗಳ ಪ್ರಯೋಜನೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಖಾಯಿಲೆ, ಇನ್ನಿತರೆ ಕಾರಣಗಳಿಂದ ಹಾಸಿಗೆಹಿಡಿದವರ ಮಾಹಿತಿಯನ್ನು ಸಂಗ್ರಹಿಸಿ, ಸಂಬಂಧಪಟ್ಟ ಅಧಿಕಾರಿಗಳ ಶಿಫಾರಸ್ಸಿನೊಂದಿಗೆ, ಖುದ್ದಾಗಿ ಅವರ ಮನೆಗಳಿಗೆ ಭೇಟಿ ನೀಡಿ, ಆಧಾರ್ ನೋಂದಣಿ ಮಾಡಿಸಬೇಕು ಎಂದು ಆಧಾರ್ ಜಿಲ್ಲಾ ಸಂಯೋಜಕ ರಂಗನಾಥ್‍ಗೆ ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಆಧಾರ್ ನೋಂದಣೆ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಅಭಿಯಾನದ ಮೂಲಕ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಸಾರ್ವಜನಿಕರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿವಾಗಿ ನೋಂದಣಿ ಕೇಂದ್ರ ತೆರೆಯಲು ಯೋಜನೆ ರೂಪಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು. ಡಾಕ್ಯೂಮೆಂಟ್ ಅಪ್ಡೇಟ್‍ಗೆ ಹೆಚ್ಚಿನ ಜಾಗೃತಿ ಮೂಡಿಸಿ: 10 ವರ್ಷದ ಹಳೆಯದಾದ ಆಧಾರ್‍ನ್ನು ಗುರುತಿನ ಹಾಗೂ ವಿಳಾಸದ ಪುರಾವೆಯೊಂದಿಗೆ ಡಾಕ್ಯೂವೆಂಟ್ ಅಪ್ಡೇಟ್ ಮಾಡಬೇಕಾಗಿದ್ದು, ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ನೀಡಿದರು.
    ಜಿಲ್ಲೆಯ ಜನಸಂಖ್ಯೆಯ ಮಾಹಿತಿ ಪಡೆದು, ಅದರಲ್ಲಿ ಎಷ್ಟು ಜನರಿಗೆ ಆಧಾರ್ ನೋಂದಣಿ ಹಾಗೂ ದಾಖಲಾತಿ ನವೀಕರಣ ಮಾಡಲಾಗಿದೆ. ಎಷ್ಟು ಬಾಕಿ ಉಳಿದಿದೆ, ಯಾವ ತಾಲ್ಲೂಕಿನಲ್ಲಿ ಕಡಿಮೆ ನೋಂದಣಿ ಆಗಿದೆ. ತಿಂಗಳಿಗೆ ಎಷ್ಟು ಜನರ ನೋಂದಣಿ ಆಗುತ್ತಿದೆ ಎಂಬುವುದರ ದತ್ತಾಂಶ ಸಂಗ್ರಹಿಸಿ, ಕ್ರಿಯಾ ಯೋಜನೆ ರೂಪಿಸಬೇಕು ಎಂದರು.  ಜಿಲ್ಲೆಯಲ್ಲಿ 7,31,173 ಜನರ ಆಧಾರ್ ಡಾಕ್ಯೂಮೆಂಟ್ ಆಪ್ಡೇಟ್ ಬಾಕಿ ಇದ್ದು, ಕಳೆದ ಮೂರು ತಿಂಗಳಿಂದ ಕೇವಲ 967 ಜನರು ಡಾಕ್ಯೂಮೆಂಟ್ ಆಪ್ಡೇಟ್ ಮಾಡಿದ್ದಾರೆ. ಈ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಯುಐಡಿಎಐನ ಪ್ರಾದೇಶಿಕ ಕಚೇರಿಯ ಯೋಜನಾ ವ್ಯವಸ್ಥಾಪಕ ವಿಜಯ್ ಕುಮಾರ್ ಮಾತನಾಡಿ, ಆಧಾರ್ ನೋಂದಣಿ ಹಾಗೂ ಆಪ್ಡೇಟ್‍ಗೆ ಅಗತ್ಯವಿರುವ ಕಿಟ್ ಸರಬರಾಜಿಗೆ ಕ್ರಮವಹಿಸಲಾಗುವುದು. ಶಾಲೆ, ಅಂಗನವಾಡಿಗಳಲ್ಲಿ ವಿಶೇಷ ಶಿಬಿರದ ಮೂಲಕ ಆಧಾರ್ ನೋಂದಣಿಗೆ ಹೆಚ್ಚುವರಿಯಾಗಿ ಆಧಾರ್ ನೋಂದಣಿ ಕಿಟ್‍ಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಆಧಾರ್ ಜಿಲ್ಲಾ ಸಂಯೋಜಕ ರಂಗನಾಥ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 80 ಕೇಂದ್ರಗಳಲ್ಲಿ ಆಧಾರ್ ನೋಂದಣಿಯಾಗುತ್ತಿದೆ. ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿ ನೋಂದಣಿಯಾಗುವ ಆಧಾರ್‍ನ ಪ್ರತಿ ದಿನದ ಮಾಹಿತಿ ಲಭ್ಯವಾದರೆ, ನಿರ್ವಹಣೆ ಹಾಗೂ ಆಧಾರ್ ನೋಂದಣಿ ಕೇಂದ್ರದ ಅಪರೇಟರ್‍ಗಳಿಗೆ ಸೂಕ್ತ ಸಲಹೆ ಸೂಚನೆ ನೀಡಲು ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸತೀಶ್ ರೆಡ್ಡಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!