ಉದಯವಾಹಿನಿ, ವೆಲ್ಲಿಂಗ್ಟನ್: ಭಾರತದ ಜೊತೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ ಕೆಟ್ಟ ಒಪ್ಪಂದ ಎಂದು ನ್ಯೂಜಿಲೆಂಡ್ ವಿದೇಶಾಂಗ ಸಚಿವ ವಿನ್‌ಸ್ಟನ್ ಪೀಟರ್ಸ್ ಟೀಕಿಸಿದ್ದಾರೆ. ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ ಅವರು, ಇದು ಮುಕ್ತ ಅಥವಾ ನ್ಯಾಯಯುತವಾದ ಒಪ್ಪಂದವಲ್ಲ. ಸಂಸತ್ತಿನ ಮುಂದೆ ಬಂದಾಗ ತಮ್ಮ ಪಕ್ಷವು ಒಪ್ಪಂದವನ್ನು ವಿರೋಧಿಸುತ್ತದೆ ಎಂದು ಎಚ್ಚರಿಸಿದ್ದಾರೆ. ನ್ಯೂಜಿಲೆಂಡ್ ತನ್ನ ಮಾರುಕಟ್ಟೆಯನ್ನು ಭಾರತೀಯ ಉತ್ಪನ್ನಗಳಿಗೆ ಸಂಪೂರ್ಣವಾಗಿ ತೆರೆಯುತ್ತದೆಯಾದರೂ, ನ್ಯೂಜಿಲೆಂಡ್‌ನ ಪ್ರಮುಖ ಡೈರಿ ರಫ್ತಿನ ಮೇಲಿನ ಗಮನಾರ್ಹ ಸುಂಕದ ಅಡೆತಡೆಗಳನ್ನು ಕಡಿಮೆ ಮಾಡಲು ಭಾರತ ಒಪ್ಪಿಕೊಂಡಿಲ್ಲ. ಇದರಿಂದ ರೈತರು ಮತ್ತು ಗ್ರಾಮೀಣ ಸಮುದಾಯಗಳನ್ನು ರಕ್ಷಿಸಲು ಅಸಾಧ್ಯ ಎಂದು ಹೇಳಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಅಂತ್ಯವಾಗಿದ್ದು, 7-8 ತಿಂಗಳಲ್ಲಿ ಇದು ಜಾರಿಗೆಯಾಗುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ದೂರವಾಣಿ ಮೂಲಕ ಸಂಭಾಷಣೆ ಮಾಡಿದ ಬಳಿಕ ಈ ಘೋಷಣೆ ಮಾಡಿದ್ದಾರೆ.ಈ ವರ್ಷದ ಮಾರ್ಚ್‌ನಲ್ಲಿ ಎರಡು ದೇಶಗಳ ಮಧ್ಯೆ ಮಾತುಕತೆ ಆರಂಭವಾಗಿತ್ತು. ಅಮೆರಿಕದ ತೆರಿಗೆ ದಾಳಿಯಿಂದ ಬೇಸತ್ತಿರುವ ಎರಡೂ ದೇಶಗಳಿಗೆ ಈ ಒಪ್ಪಂದ ಲಾಭ ತರುವ ನಿರೀಕ್ಷೆಯಿದೆ.
