ಉದಯವಾಹಿನಿ, ಕೀವ್, ಉಕ್ರೇನ್: ರಷ್ಯಾ – ಉಕ್ರೇನ್ ನಡುವಿನ ಶಾಂತಿ ಒಪ್ಪಂದಕ್ಕಾಗಿ ಅಮೆರಿಕದ ಪ್ರಸ್ತಾವನೆಗಳ ಆರಂಭಿಕ ಕರಡುಗಳು ಕೀವ್ ನ ಅನೇಕ ಬೇಡಿಕೆಗಳನ್ನು ಪೂರೈಸುತ್ತವೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ಹೇಳಿದ್ದಾರೆ.ಸುಮಾರು ನಾಲ್ಕು ವರ್ಷಗಳ ಸುದೀರ್ಘ ಯುದ್ಧದಲ್ಲಿ ಯಾವುದೇ ಪಕ್ಷವು ಮಾತುಕತೆಗಳಲ್ಲಿ ಬಯಸಿದ ಎಲ್ಲವನ್ನೂ ಪಡೆಯುವ ಸಾಧ್ಯತೆಯಿಲ್ಲ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ. ಒಟ್ಟಾರೆ ಈ ಹಂತದಲ್ಲಿ ಶಾಂತಿ ಮಾತುಕತೆ ಸಾಕಷ್ಟು ದೃಢವಾಗಿ ಕಂಡು ಬರುತ್ತಿದೆ ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ. ನಾವು ಬಹುಶಃ ಸಿದ್ಧವಾಗಿಲ್ಲದ ಕೆಲವು ವಿಷಯಗಳಿವೆ, ಮತ್ತು ರಷ್ಯನ್ನರು ಸಿದ್ಧವಾಗಿಲ್ಲದ ಅನೇಕ ವಿಷಯಗಳಿವೆ ಎಂದು ನನಗೆ ಖಚಿತವಾಗಿದೆ ಎಂದು ಝೆಲೆನ್ಸ್ಕಿಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಂಗಳುಗಳಿಂದ ಶಾಂತಿ ಒಪ್ಪಂದ ಮಾಡಿಕೊಳ್ಳುಂತೆ ಎರಡೂ ರಾಷ್ಟ್ರಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಮಾತುಕತೆಗಳು ಮಾಸ್ಕೋ ಮತ್ತು ಕೀವ್ ನಿಂದ ತೀವ್ರವಾಗಿ ಸಂಘರ್ಷದ ಬೇಡಿಕೆಗಳಿಗೆ ಸಿಲುಕಿವೆ. ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಭಾನುವಾರ ಫ್ಲೋರಿಡಾದಲ್ಲಿ ಉಕ್ರೇನಿಯನ್ ಮತ್ತು ಯುರೋಪಿಯನ್ ಪ್ರತಿನಿಧಿಗಳೊಂದಿಗೆ ಉತ್ಪಾದಕ ಮತ್ತು ರಚನಾತ್ಮಕ ಮಾತುಕತೆಗಳನ್ನು ನಡೆಸಿರುವುದಾಗಿ ಹೇಳಿದ್ದಾರೆ. ವಿಟ್ಕಾಫ್ ಹೀಗೆ ಹೇಳಿದ ಮರುದಿನವೇ ಟ್ರಂಪ್ ಕಡಿಮೆ ಉತ್ಸಾಹದಿಂದ ಇರುವುದು ಕಂಡು ಬಂತು ಅಲ್ಲದೇ ಮಾತುಕತೆಗಳು ಮುಂದುವರಿಯುತ್ತಿವೆ ಎಂದಷ್ಟೇ ಹೇಳಿ ಸುಮ್ಮನಾದರು.
ನಾವು ಮಾತನಾಡುತ್ತಿದ್ದೇವೆ. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು ಟ್ರಂಪ್ ಸೋಮವಾರ ಫ್ಲೋರಿಡಾದ ತಮ್ಮ ಮಾರ್-ಎ-ಲಾಗೊ ಎಸ್ಟೇಟ್‌ನಲ್ಲಿ ಹೇಳಿದರು. ಝೆಲೆನ್ಸ್ಕಿ ಅಥವಾ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಲು ಯೋಜಿಸುತ್ತಿದ್ದೀರಾ ಎಂದು ಕೇಳಿದಾಗ, ಟ್ರಂಪ್ ಅದು ನಿಲ್ಲುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಹೇಳಿದರು. ಇನ್ನೊಂದು ಕಡೆ ಉಕ್ರೇನ್‌ನ ಸುಮಾರು ಶೇ 90ರಷ್ಟು ಬೇಡಿಕೆಗಳನ್ನು ಕರಡು ಒಪ್ಪಂದಗಳಲ್ಲಿ ಸೇರಿಸಲಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್, ಯುರೋಪಿಯನ್ ದೇಶಗಳು ಮತ್ತು ಅಮೆರಿಕ ನಡುವಿನ ಭದ್ರತಾ ಖಾತರಿಗಳ ಕುರಿತು ಒಂದು ಕರಡು ರಚನೆ ಮಾಡಲಾಗಿದೆ. ಜೊತೆಗೆ ಉಕ್ರೇನ್‌ಗೆ ಅಮೆರಿಕ ನೀಡಿದ ದ್ವಿಪಕ್ಷೀಯ ಭದ್ರತಾ ಖಾತರಿಗಳ ಕುರಿತು ಪ್ರತ್ಯೇಕ ದಾಖಲೆಯೂ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.
