ಉದಯವಾಹಿನಿ, ಅಯೋಧ್ಯೆ: ಕರ್ನಾಟಕ ಮೂಲದ ದಾನಿಯೊಬ್ಬರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 2.5 ಕೋಟಿ ರೂ. ಮೌಲ್ಯದ ಚಿನ್ನದ ರಾಮನ ಮೂರ್ತಿಯನ್ನು ಕೊಡುಗೆ ನೀಡಿದ್ದಾರೆ. ಈ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ ಮಾಹಿತಿ ನೀಡಿದ್ದು, ವಜ್ರ, ಪಚ್ಚೆ ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ ಹಾಗೂ 8 ಅಡಿ ಅಗಲದ ರಾಮನ ಮೂರ್ತಿಯನ್ನು ದಾನ ನೀಡಿದ್ದಾರೆ. ಆದರೆ ದಾನ ನೀಡಿದವರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಕರ್ನಾಟಕ ಮೂಲದ ಅನಾಮಿಕ ಭಕ್ತರೊಬ್ಬರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲಾ ಶೈಲಿಯಲ್ಲಿ ರಚಿಸಲಾದ ಈ ಪ್ರತಿಮೆಯ ಮೌಲ್ಯ ಅಂದಾಜು 2.5 ಕೋಟಿ ರೂ. ಎನ್ನಲಾಗಿದೆ. ಸದ್ಯ ಮೂರ್ತಿಯ ತೂಕವನ್ನು ಅಳೆಯಲಾಗುತ್ತಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು ಐದು ಕ್ವಿಂಟಾಲ್‌ನಷ್ಟಿರಬಹುದು ಎನ್ನಲಾಗಿದೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಂಜಾವೂರಿನ ನುರಿತ ಕುಶಲಕರ್ಮಿಗಳು ಮೂರ್ತಿಯ ಕೆತ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದಕ್ಕೆ ಕಲಾತ್ಮಕ ಮತ್ತು ಭವ್ಯವಾದ ನೋಟವನ್ನು ನೀಡಿದ್ದಾರೆ. ವಜ್ರಗಳು, ಪಚ್ಚೆಗಳು, ನೀಲಮಣಿಗಳು ಮತ್ತು ಚಿನ್ನದಿಂದ ಕೂಡಿದ್ದು, ಬಳಸಿದ ನಿಖರವಾದ ಲೋಹವನ್ನು ತಜ್ಞರು ಗುರುತಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
