ಉದಯವಾಹಿನಿ, ನವದೆಹಲಿ: ಇತ್ತೀಚೆಗೆ ಇಂಡಿಗೋ ವಿಮಾನಯಾನ ಸಂಸ್ಥೆಯಿಂದಾಗಿ ಉಂಟಾದ ಅವ್ಯವಸ್ಥೆಗಳ ನಂತರ, ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಕೆಲವು ಸಂಸ್ಥೆಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಹೀಗಾಗಿ ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಅನುಮೋದನೆ ನೀಡಿದೆ. ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್ಪ್ರೆಸ್ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರಪೇಕ್ಷಣಾ ಪ್ರಮಾಣಪತ್ರ (NOC) ನೀಡಲಾಗಿದೆ. ಶಂಖ್ ಏರ್ ಸಂಸ್ಥೆಗೆ ಈಗಾಗಲೇ NOC ದೊರಕಿತ್ತು. ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್ಪ್ರೆಸ್‌ಗೆ ಈ ವಾರ ಅನುಮೋದನೆ ದೊರೆತಿದೆ.
ಕೇರಳ ಮೂಲದ ಅಲ್ ಹಿಂದ್ ಗ್ರೂಪ್ `ಅಲ್ ಹಿಂದ್ ಏರ್’ ಸಂಸ್ಥೆಯನ್ನು ಪ್ರಾರಂಭಿಸಿದೆ. ಈ ಗ್ರೂಪ್ ಪ್ರಯಾಣ ಮತ್ತು ಸಂಬಂಧಿತ ಸೇವೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಈ ಮೂರು ಸಂಸ್ಥೆಗಳು ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವ ಮೊದಲು ಹಲವು ನಿಯಮಾವಳಿ ಮತ್ತು ಕಾರ್ಯಾಚರಣೆ ಸಂಬಂಧಿತ ಹಂತಗಳನ್ನು ಪೂರ್ಣಗೊಳಿಸಬೇಕಿದೆ. ಶಂಖ್ ಏರ್ 2026ರಲ್ಲಿ ಸೇವೆ ಆರಂಭಿಸುವ ನಿರೀಕ್ಷೆಯಿದೆ. ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಮೂರು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅನುಮೋದನೆ ನೀಡಲಾಗಿದೆ ಎಂದು ದೃಢಪಡಿಸಿದ್ದಾರೆ. ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಗ್ರೂಪ್ ಒಟ್ಟಾಗಿ ಶೇ.90ಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ. ಇದರಲ್ಲಿ ಇಂಡಿಗೋ ಏಕಾಏಕಿ ಶೇ.65ಕ್ಕಿಂತ ಹೆಚ್ಚು ಹಿಡಿತ ಸಾಧಿಸಿದೆ.
