ಉದಯವಾಹಿನಿ, : ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಬ್ಯಾಟಿಂಗ್‌ ಕೋಚ್‌ ಆಗಿ ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ನೇಮಕಗೊಂಡಿದ್ದಾರೆ. ಮಾರ್ಚ್‌ 10 ರಂದು ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪೋಸ್ಟ್‌ ಹಾಕುವ ಮೂಲಕ ಗುಜರಾತ್‌ ತಂಡ ಈ ಮಾಹಿತಿಯನ್ನು ನೀಡಿದೆ. ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಸೇರಿದಂತೆ ಫ್ರಾಂಚೈಸಿ ಲೀಗ್‌ಗಳಲ್ಲಿ ಅಪಾರ ಅನುಭವವನ್ನು ಹೊಂದಿರುವ ಮ್ಯಾಥ್ಯೂ ಹೇಡನ್‌ ಅವರ ಸೇರ್ಪಡೆಯಾಗುವ ಗುಜರಾತ್‌ ಕೋಚಿಂಗ್‌ ವಿಭಾಗಕಕ್ಕೆ ಇದೀಗ ಆನೆ ಬಲ ಬಂದಂತಾಗಿದೆ. ಈ ಆವೃತ್ತಿಯಲ್ಲಿಯೂ ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಗುಜರಾತ್‌ ಕಣಕ್ಕೆ ಇಳಿಯಲಿದೆ.

ಕಳೆದ 2025ರ ಐಪಿಎಲ್‌ ಟೂರ್ನಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ, ಮೂರನೇ ಸ್ಥಾನದ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು. ಈ ಟೂರ್ನಿಯಲ್ಲಿ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಸೋಲುವ ಮೂಲಕ ಗುಜರಾತ್‌ ಟೈಟನ್ಸ್‌ ತಂಡ ಟೂರ್ನಿಯಿಂದ ಹೊರ ಬಿದ್ದಿತ್ತು. ಮ್ಯಾಥ್ಯೂ ಹೇಡನ್‌ ಆಗಮನದಿಂದ ಗುಜರಾತ್‌ ತಂಡ ಇದೀಗ ತನ್ನ ಬ್ಯಾಟಿಂಗ್‌ ವಿಭಾಗ ಇನಷ್ಟು ಬಲಿಷ್ಠವಾಗುವ ಸಾಧ್ಯತೆ ಇದೆ.
ಮ್ಯಾಥ್ಯೂ ಹೇಡನ್‌ ಅವರ ನೇಮಕದ ಬಗ್ಗೆ ಗುಜರಾತ್‌ ಟೈಟನ್ಸ್‌ ತಂಡದ ನಿರ್ದೇಶಕ ವಿಕ್ರಮ್‌ ಸೋಲಂಕಿ ಮಾತನಾಡಿ, ಆಸ್ಟ್ರೇಲಿಯಾ ದಿಗ್ಗಜ ಅನುಭವದ ಮೇಲೆ ಫ್ರಾಂಚೈಸಿ ನಂಬಿಕೆಯನ್ನು ಇಟ್ಟಿದೆ. ಅವರ ಮಾರ್ಗದರ್ಶನ ನಿಜಕ್ಕೂ ತಂಡದ ಬ್ಯಾಟಿಂಗ್‌ ಫಿಲಾಸಫಿಯನ್ನು ಮುಂದಕ್ಕೆ ತರಲಿದೆ ಎಂದಿದ್ದಾರೆ.

“ನಮ್ಮ ಪಯಣದ ನಿರ್ಣಾಯಕ ಸಮಯದಲ್ಲಿ ಮ್ಯಾಥ್ಯೂ ಹೇಡನ್‌ ಅವರ ನೇಮಕವಾಗಿದೆ. ದೀರ್ಘಕಾಲಿಕ ಯಶಸ್ಸು ಮತ್ತು ಅತ್ಯುತ್ತಮವಾದುದ್ದಕ್ಕೆ ಬದ್ಧವಾಗಿರುವ ಫ್ರಾಂಚೈಸಿಯಾಗಿ, ನಮ್ಮ ಕ್ರಿಕೆಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ನಾವು ಸದಾ ಗಮನಹರಿಸಿದ್ದೇವೆ. ಅಗ್ರ ದರ್ಜೆಯಲ್ಲಿನ ಅವರ ಅನುಭವದ ಜೊತೆಗೆ, ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಅವರ ಸಾಮರ್ಥ್ಯವು ಮುಂದಿನ ಋತುಗಳಲ್ಲಿ ನಮ್ಮ ಬ್ಯಾಟಿಂಗ್ ಗುರುತನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಫ್ರಾಂಚೈಸಿ ತಿಳಿಸಿದೆ,” ಎಂದು ವಿಕ್ರಮ್‌ ಸೋಲಂಕಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!