ಉದಯವಾಹಿನಿ, ಭೋಪಾಲ್‌ : ಮಧ್ಯ ಪ್ರದೇಶದಲ್ಲಿ ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿ 24 ಮಕ್ಕಳು ಪ್ರಾಣ ಕಳೆದುಕೊಂಡ ದುರಂತ ಕೆಲವು ದಿನಗಳ ಹಿಂದೆ ನಡೆದು ದೇಶವೇ ಬೆಚ್ಚಿ ಬಿದ್ದಿತ್ತು. ಅದೇ ವಿಷಕಾರಿ ಸಿರಪ್ ಸೇವಿಸಿದ ಒಬ್ಬ ಬಾಲಕ ಸುಮಾರು 115 ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಡಿ ಬದುಕುಳಿದಿದ್ದಾನೆ. ಆದರೆ ಜವರಾಯನ ಪಂಜರದಿಂದ ಪಾರಾದರೂ ಆ ನತದೃಷ್ಟ ಬಾಲಕನ ಬಾಳಲ್ಲಿ ಇದೀ ಕತ್ತಲೆ ಆವರಿಸಿದೆ.

ಹೌದು, ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ಸೇವಿಸಿ ತೀವ್ರ ಅಸ್ವಸ್ಥಗೊಂಡ ಮಕ್ಕಳಲ್ಲಿ ಛಿಂದ್ವಾಡಾ ಜಿಲ್ಲೆಯ ಜಟಛಾಪರ್ ಗ್ರಾಮದ 5 ವರ್ಷದ ಬಾಲಕ ಕುನಾಲ್ ಯದುವಂಶಿ ಕೂಡ ಒಬ್ಬ. 24 ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡರೆ, ಕುನಾಲ್ ಮಾತ್ರ ತಿಂಗಳಾನುಗಟ್ಟಲೆ ಚಿಕಿತ್ಸೆ, ದೀರ್ಘಕಾಲದ ಡಯಾಲಿಸಿಸ್ ಮತ್ತು ನಿರಂತರ ವೈದ್ಯಕೀಯ ಆರೈಕೆಯ ನಂತರ ಬದುಕುಳಿದಿದ್ದಾನೆ. ಇದೀಗ ಆತ ಮರಳಿ ಮನೆಗೆ ಬಂದಿದ್ದು, ಮೂರು ತಿಂಗಳಿಗೂ ಹೆಚ್ಚು ಕಾಲ ಮೌನ ಆವರಿಸಿದ್ದ ಮನೆಯೊಳಗೆ ಮತ್ತೆ ಸಂಭ್ರಮ ಮನೆ ಮಾಡಿದೆ. ಆದರೆ ಜೀವನ್ಮರಣದ ಹೋರಾಟದಲ್ಲಿ ಕುನಾಲ್‌ಗೆ ಗೆಲುವಾದರೂ, ವಿಷಕಾರಿ ಸಿರಪ್‌ನಿಂದಾಗಿ ಆತ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾನೆ. ಇದೀಗ ಅವನು ನಡೆದಾಡಲೂ ತೊಂದರೆ ಅನುಭವಿಸುತ್ತಿದ್ದು, ಆತ ಚೇತರಿಸಿಕೊಳ್ಳಲು ಬಹು ಸಮಯ ತೆಗೆದುಕೊಳ್ಳಬಹುದು ಅಥವಾ ಚೇತರಿಸಿಕೊಳ್ಳದೇಯೂ ಇರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಆಗಸ್ಟ್ 24ರಂದು ಕುನಾಲ್‌ಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದರಿಂದ ಪೋಷಕರು ಅವನನ್ನು ಸ್ಥಳೀಯ ವೈದ್ಯ ಡಾ. ಪ್ರವೀಣ್ ಸೋನಿ ಅವರ ಬಳಿಗೆ ಕರೆದೊಯ್ದಿದ್ದರು. ಅವರು ಕೆಲ ಔಷಧ ಹಾಗೂ ಕೆಮ್ಮು ಸಿರಪ್ ಅನ್ನು ಬರೆದುಕೊಟ್ಟಿದ್ದರು. ಆ ಔಷಧ ಹಾಗೂ ಸಿರಪ್ ಸೇವಿಸಿದ ಬಳಿಕ ಕುನಾಲ್ ಸ್ಥಿತಿ ಚೇತರಿಸಿಕೊಳ್ಳುವ ಬದಲು, ವೇಗವಾಗಿ ಹದಗೆಟ್ಟಿತು. ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಗಳಲ್ಲಿ, ಆ ಸಿರಪ್ ಕುನಾಲ್ ಎರಡೂ ಮೂತ್ರಪಿಂಡಗಳಿಗೆ ಗಂಭೀರ ಹಾನಿ ಉಂಟುಮಾಡಿದ್ದು, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂತು.

Leave a Reply

Your email address will not be published. Required fields are marked *

error: Content is protected !!