ಉದಯವಾಹಿನಿ, ಸಂಬಲ್ಪುರ: ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಆರು ಜನರ ಗುಂಪೊಂದು ಪಶ್ಚಿಮ ಬಂಗಾಳದ ಓರ್ವ ವಲಸೆ ಕಾರ್ಮಿಕನೊಬ್ಬನನ್ನು ಹೊಡೆದು ಕೊಂದು, ಮತ್ತಿಬ್ಬರನ್ನು ಥಳಿಸಿದೆ. ಆರೋಪಿಗಳು ಹಲ್ಲೆ ನಡೆಸುವ ಮೊದಲು ಸಂತ್ರಸ್ತರ ಆಧಾರ್ ಕಾರ್ಡ್ ಕೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮೃತಪಟ್ಟ ಶೇಖ್ ಜುಯೆಲ್ (30) ಪ.ಬಂಗಾಳದ ಮುರ್ಷಿದಾಬಾದ್ ನಿವಾಸಿಯಾಗಿದ್ದು, ಸಂಬಲ್ಪುರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಇಲ್ಲಿನ ಐಂಥಪಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ದಾನಿಪಾಲಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಇತರ ಇಬ್ಬರು ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಒಡಿಶಾ ಪೊಲೀಸರು ಇದನ್ನು ದ್ವೇಷಾಪರಾಧ ಎಂದು ಕರೆಯಲು ನಿರಾಕರಿಸಿದರೆ, ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, ‘ಅವರ ಭಾಷೆ, ಗುರುತು ಮತ್ತು ಬಂಗಾಳಿಯ ಅಸ್ತಿತ್ವಕ್ಕಾಗಿ’ ಹೊಡೆದು ಕೊಲ್ಲಲಾಯಿತು ಎಂದು ಆಕ್ರೋಶ ಹೊರಹಾಕಿದ್ದಾರೆ.”
ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ಕಳೆದ ಕೆಲವು ದಿನಗಳಿಂದ ದಾನಿಪಾಲಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು” ಎಂದು ಐಂಥಪಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಪ್ರದ್ಯುಮ್ನ ಸ್ವೈನ್ ತಿಳಿಸಿದರು.ಸುಮಾರು 11:30ರ ಸುಮಾರಿಗೆ ಮೂವರು ಕಾರ್ಮಿಕರು ಹತ್ತಿರದ ಅಂಗಡಿಗೆ ಪಾನ್ ಮಸಾಲ ಮತ್ತು ಬೀಡಿ ಖರೀದಿಸಲು ಹೋಗಿದ್ದಾರೆ. ಅಲ್ಲಿ ಕೆಲವು ದುಷ್ಕರ್ಮಿಗಳು ಮೊದಲು ಅವರೊಂದಿಗೆ ಮಾತನಾಡಿ ಬೀಡಿ ಕೇಳಿದ್ದಾರೆ. ಈ ಸಮಯದಲ್ಲಿ ವಾಗ್ವಾದ ನಡೆದಿದೆ. ಆಗ ಅವರು ಬಂಗಾಳದ ಕಾರ್ಮಿಕರನ್ನು ತಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸುವಂತೆ ಕೇಳಿದ್ದಾರೆ. ಕೂಡಲೇ ವಾಗ್ವಾದ ಭುಗಿಲೆದ್ದಿದೆ. ಯುವಕರು ವಲಸೆ ಕಾರ್ಮಿಕರೊಂದಿಗೆ ಘರ್ಷಣೆ ನಡೆಸಿದಾಗ ಅದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ನಂತರ ದುಷ್ಕರ್ಮಿಗಳು ಕಾರ್ಮಿಕರನ್ನು ಥಳಿಸಿದ್ದಾರೆ. ಸಂತ್ರಸ್ತ ಶೇಖ್ ಜುಯೆಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ” ಎಂದು ಸ್ವೈನ್ ಹೇಳಿದರು.ದಾಳಿಯಲ್ಲಿ ಅಕುರ್ ರೆಹಮಾನ್ ಮತ್ತು ಸೋನ್ವರ್ ಹುಸೇನ್ ಎಂಬಿಬ್ಬರು ಕಾರ್ಮಿಕರೂ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು.
