ಉದಯವಾಹಿನಿ, ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಯೋಧರಿಗೆ ನೆರವು ನೀಡಿದ್ದ ಬಾಲಕ ಶ್ರವಣ್ ಸಿಂಗ್‌ಗೆ ಮಕ್ಕಳಿಗೆ ನೀಡುವ ಅತ್ಯುನ್ನತ ಗೌರವ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಿ ಸನ್ಮಾನಿಸಿದರು.
ಫಿರೋಜ್‌ಪುರ ಜಿಲ್ಲೆಯ ಗಡಿ ಗ್ರಾಮ ಮಾಮ್‌ಡೋಟ್‌ನ ಶ್ರವಣ್ ಸಿಂಗ್ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ತಮ್ಮ ಮನೆಯ ಬಳಿ ನಿಯೋಜಿಸಿದ್ದ ಸೈನಿಕರಿಗೆ ನೀರು, ಹಾಲು, ಚಹಾ, ಲಸ್ಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಸೇನಾ ಪೋಸ್ಟ್‌ಗಳಿಗೆ ತೆರಳುತ್ತಿದ್ದ. ಇದರಿಂದ ಸೈನಿಕರ ಜೊತೆ ಅವನಿಗೆ ಭಾವನಾತ್ಮಕ ಸಂಬಂಧ ಬೆಳೆದಿತ್ತು. ಇನ್ನೂ, ಆಪರೇಷನ್ ಸಿಂಧೂರ್ ಸಮಯದಲ್ಲಿ ಬಾಲಕನಿಗೆ ‘ಕಿರಿಯ ನಾಗರಿಕ ಯೋಧ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
10ರ ಬಾಲಕನಿಂದ ಸಿಕ್ಕ ಸಹಾಯ ಏನು?
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್ ಕಣಿವೆ ಪ್ರದೇಶದಲ್ಲಿರುವ ಪಹಲ್ಗಾಮ್‌ನಲ್ಲಿ ನಾಲ್ವರು ಉಗ್ರರು ಅಟ್ಟಹಾಸ ಮೆರೆದಿದ್ದರು. ಓರ್ವ ವಿದೇಶಿಗ ಸೇರಿ 26 ಮಂದಿಯನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಶುರು ಮಾಡಿತು. ಮೇ 7ರ ಮಧ್ಯರಾತ್ರಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ 9 ಅಡಗು ತಾಣಗಳನ್ನ ಧ್ವಂಸಗೊಳಿಸಿತ್ತು.
