ಉದಯವಾಹಿನಿ, ಕೊಪ್ಪಳ: ಜನ್ಮ ನೀಡಿದ 10 ಗಂಟೆಯಲ್ಲೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಗಂಡು ಕೂಸಿನ ಪ್ರಾಣ ಕಾಪಾಡಲು, ಝೀರೋ ಟ್ರಾಫಿಕ್ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವನ್ನ ರವಾನೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಹೆರಿಗೆಯ ವೇಳೆ ಶಿಶುವಿನ ಕರುಳು ಹೊರ ಬಂದು, ಶಿಶು ಜೀವನ್ಮರಣ ಹೋರಾಟ ನಡೆಸಿತ್ತು. ಈ ಹಿನ್ನೆಲೆ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯರು, ಮಗುವನ್ನ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲು ಚಿಂತನೆ ನಡೆಸಿ, ನಿಗದಿತ ಸಮಯದಲ್ಲಿ ಮಗುವಿನ ರವಾನೆಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿದ್ದಾರೆ.
30 ಅಂಬುಲೆನ್ಸ್‌ ಮೂಲಕ (ಕೊಪ್ಪಳದಿಂದ 5 ಅಂಬುಲೆನ್ಸ್‌ ಸೇರಿ), ಪೊಲೀಸ್ ಇಲಾಖೆಯ ಸಹಾಯ ಪಡೆದು ಝೀರೋ ಟ್ರಾಫಿಕ್ ಮೂಲಕ ಮಗುವನ್ನ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಿದ್ದಾರೆ. ನಿನ್ನೆ ರಾತ್ರಿ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದಳು. ಅಲ್ಲಿಂದ ಕೊಪ್ಪಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕುಕನೂರು ತಾಲೂಕಿನ ಗುತ್ತೂರಿನ ಮಲ್ಲಪ್ಪ- ವಿಜಯಲಕ್ಷ್ಮೀ ದಂಪತಿಯ ಗಂಡು ಮಗುವನ್ನ ಝೀರೋ ಟ್ರಾಫಿಕ್ ಮೂಲಕ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ.
ಕೊಪ್ಪಳದಿಂದ ಹುಬ್ಬಳ್ಳಿಗೆ 120 ಕಿಲೋಮೀಟರ್ ಅಂತರವಿದ್ದು, ಸಾಮಾನ್ಯವಾಗಿ ಪ್ರಯಾಣಕ್ಕೆ ಎರಡೂವರೆ ಗಂಟೆ ಬೇಕು. ಆದ್ರೆ ಶಿಶುವಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆ, ಅಖಿಲ ಕರ್ನಾಟಕ ಆಂಬುಲೆನ್ಸ್ ರೋಡ್ ಸೇಫ್ಟಿ ಸಂಘಟನೆಗೆ ನೆರವಿನಿಂದ ಕೊಪ್ಪಳದಿಂದ ಹುಬ್ಬಳ್ಳಿ ತಲುಪಲು ಹಂತ ಹಂತವಾಗಿ ಒಟ್ಟು 30 ಅಂಬುಲೆನ್ಸ್‌ಗಳ ಸಹಾಯದಿಂದ ಕೇವಲ 1 ಗಂಟೆಯಲ್ಲಿ ಹುಬ್ಬಳ್ಳಿಗೆ ಶಿಶುವನ್ನ ಸಾಗಿಸಲಾಯಿತು.

 

Leave a Reply

Your email address will not be published. Required fields are marked *

error: Content is protected !!