ಉದಯವಾಹಿನಿ, ಕಠ್ಮಂಡು(ನೇಪಾಳ): ನೇಪಾಳದ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಕಠ್ಮಂಡು ಮಹಾನಗರದ ಮೇಯರ್, ಯುವ ನಾಯಕ ಬಾಲೇಂದ್ರ ಶಾ ಅವರನ್ನು ಆಯ್ಕೆ ಮಾಡಲು ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಒಪ್ಪಂದ ಮಾಡಿಕೊಂಡಿದೆ. ಇವರು ಬೆಂಗಳೂರಿನಲ್ಲಿ ಎಂ.ಟೆಕ್ ಶಿಕ್ಷಣ ಪಡೆದಿದ್ದಾರೆ.ಮುಂದಿನ ವರ್ಷದ ಮಾರ್ಚ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೆ ಶಾ, ಪಕ್ಷದ ಸಂಸದೀಯ ನಾಯಕ ಮತ್ತು ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ.
ಆರ್‌ಎಸ್‌ಪಿ 7 ಅಂಶದ ಒಪ್ಪಂದ ಮಾಡಿಕೊಂಡಿದ್ದು, ಆರ್‌ಎಸ್‌ಪಿ ಅಧ್ಯಕ್ಷೆ ರಬಿ ಲಮಿಚಾನೆ ಪಕ್ಷದ ಕೇಂದ್ರ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಚುನಾವಣೆಯ ನಂತರ ಶಾ ಅವರು ಪಕ್ಷದ ಸಂಸದೀಯ ನಾಯಕ ಮತ್ತು ಅದರ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ. ಈ ಕುರಿತು ಲಾಮಿಚಾನೆ ಮತ್ತು ಶಾ ಔಪಚಾರಿಕ ಮತ್ತು ಅನೌಪಚಾರಿಕ ಸಭೆಗಳನ್ನು ನಡೆಸಿದ್ದು, ವಾರಗಳ ಕಾಲ ನಡೆದ ಮಾತುಕತೆಯಲ್ಲಿ ಸಹಕಾರ ಮತ್ತು ಏಕತೆಯ ಕುರಿತು ಚರ್ಚಿಸಲಾಗಿದೆ.
ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಪಕ್ಷದ ರಾಜಕೀಯ ದೃಷ್ಟಿಕೋನ, ನಾಯಕತ್ವ ವ್ಯವಸ್ಥೆ ಮತ್ತು ಭವಿಷ್ಯದ ಕಾರ್ಯತಂತ್ರವನ್ನು ವಿವರಿಸಿ ಪ್ರಕಟಣೆ ಹೊರಡಿಸಲಾಗಿದೆ.ದೇಶದಲ್ಲಿ ಸೆಪ್ಟೆಂಬರ್ 8 ಮತ್ತು ಸೆಪ್ಟೆಂಬರ್ 9ರಂದು ನಡೆದ ಝೆನ್ ಜಿ ಪ್ರತಿಭಟನೆಗಳೂ ಸೇರಿದಂತೆ ಯುವ ನೇತೃತ್ವದ ಚಳುವಳಿಗಳ ಹಿನ್ನೆಲೆಯಲ್ಲಿ, ಯುವ ನೇತೃತ್ವದ ರಾಜಕೀಯ ಶಕ್ತಿಗಳನ್ನು ಒಗ್ಗೂಡಿಸಲಾಗುವುದು, ಪಕ್ಷದ ಸಾಂಸ್ಥಿಕ ರಚನೆಯನ್ನು ವಿಸ್ತರಿಸಿ, ಬಲಪಡಿಸಲಾಗುವುದು, ವಿಶ್ವಾಸಾರ್ಹ ಯುವ ಕಾರ್ಯಕರ್ತರಿಗೆ ಪಕ್ಷದೊಳಗೆ ಜವಾಬ್ದಾರಿಗಳನ್ನು ವಹಿಸಲಾಗುವುದು ಎನ್ನುವ ಮೂಲಕ ಝೆನ್ ಜಿಗಳನ್ನೂ ಸೆಳೆಯುವ ಪ್ರಯತ್ನ ನಡೆಸಲಾಗಿದೆ.
