ಉದಯವಾಹಿನಿ, ವಾಷಿಂಗ್ಟನ್ : ರಷ್ಯಾ ಉಕ್ರೇನ್ ನಡುವಿನ ಯುದ್ಧ ಕೊನೆಗೊಳ್ಳುವ ಹಂತದಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ತನ್ನ ಖಾಸಗಿ ನಿವಾಸ ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿ ಟ್ರಂಪ್ ಮಹತ್ವದ ಸಭೆ ನಡೆಸಿದರು.ಎರಡು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಮಾತನಾಡಿದ ಟ್ರಂಪ್, ನಾವು ಎರಡೂ ಕಡೆಯವರೊಂದಿಗೆ ಬಹಳ ಹತ್ತಿರವಾಗಿದ್ದೇವೆ ಎಂದರು.
ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ ಪೂರ್ಣಗೊಂಡಿದೆ. ಎರಡೂ ಕಡೆಯವರು ಆ ಯುದ್ಧವನ್ನು ಕೊನೆಗೊಳಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಎಂದು ತಿಳಿಸಿದರು. ಝೆಲೆನ್ಸ್ಕಿ ಜೊತೆ ಸಭೆ ನಡೆಸುವ ಮೊದಲು ಟ್ರಂಪ್ ಪುಟಿನ್‌ಗೆ ದೂರವಾಣಿ ಕರೆ ಮಾಡಿ ಯುದ್ಧ ಕೊನೆಗೊಳಿಸುವ ಸಂಬಂಧ ಮಾತನಾಡಿದ್ದರು. ಯುದ್ಧ ಮುಗಿಸುವ ಸಂಬಂಧ ಟ್ರಂಪ್ ಉಕ್ರೇನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
