ಉದಯವಾಹಿನಿ, ಲಂಡನ್ : ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ ಜತೆ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿರುವ ಫೋಟೊ, ವಿಡಿಯೊ ಹಂಚಿಕೊಂಡು “ನಾವೇ ಅತೀ ದೊಡ್ಡ ಪಲಾಯನವಾದಿಗಳು” ಎಂದು ಹೇಳಿಕೆ ನೀಡಿರುವುದಕ್ಕೆ ಲಲಿತ್ ಮೋದಿ ಇದೀಗ ಸಾಮಾಜಿಕ ಜಲಾತಾಣ ಎಕ್ಸ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗಷ್ಟೇ ವಿಜಯ ಮಲ್ಯ ಹಾಗೂ ಐಪಿಎಲ್ ಅವ್ಯವಹಾರದಿಂದ ವಿದೇಶಕ್ಕೆ ಪರಾರಿಯಾದ ಲಲಿತ್ ಮೋದಿ ಇಬ್ಬರು ಜತೆಯಾಗಿ ಪಾರ್ಟಿ ಮಾಡಿದ ಫೋಟೊ, ವಿಡಿಯೊ ಭಾರಿ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ತಮ್ಮನ್ನು ಭಾರತದ ಅತಿದೊಡ್ಡ ಪಲಾಯನವಾದಿಗಳು ಎಂದು ಪರಿಚಯಿಸಿಕೊಂಡಿರುವುದು ದೇಶವನ್ನು ಅಪಹಾಸ್ಯ ಮಾಡಿದಂತೆ ಎನಿಸಿತ್ತು.
ಲಲಿತ್ ಮೋದಿ ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, “ಭಾರತದಲ್ಲಿ ಮತ್ತೆ ಇಂಟರ್‌ನೆಟ್ ಬ್ರೇಕ್ ಮಾಡೋಣ. ಜನ್ಮದಿನದ ಶುಭಾಶಯಗಳು ನನ್ನ ಸ್ನೇಹಿತ ವಿಜಯ್ ಮಲ್ಯ. ಲವ್ ಯು” ಎಂಬ ಶೀರ್ಷಿಕೆ ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ ವಿಡಿಯೊದಲ್ಲಿ “ನಾವು ಇಬ್ಬರೂ ಭಾರತದ ಅತಿ ದೊಡ್ಡ ಪಲಾಯನವಾದಿಗಳು” ಎಂದು ಮೋದಿ ಹೇಳಿದ್ದು ಈ ವೇಳೆ ಮಲ್ಯ ನಗುತ್ತಿರುವುದು ಕಂಡು ಬಂದಿತ್ತು.
