ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಯುವತಿಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿಯರನ್ನ ಗಾರ್ಲಾ ಮಂಡಲದ ನಿವಾಸಿ ಪುಲ್ಲಖಂಡಂ ಮೇಘನಾ ರಾಣಿ (25) ಮತ್ತು ಮಹಾಬುಬಾಬಾದ್ ಜಿಲ್ಲೆಯ ಮುಲ್ಕನೂರು ಗ್ರಾಮದ ಕಡಿಯಾಲ ಭಾವನಾ (24) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಮೂರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಸದ್ಯದಲ್ಲೇ ತಮ್ಮ ವ್ಯಾಸಂಗ ಮುಗಿಯುತ್ತಿದ್ದು, ಉದ್ಯೋಗ ಗಿಟ್ಟಿಸಿಕೊಳ್ಳುವ ತವಕದಲ್ಲಿದ್ದರು. ಆದ್ರೆ ಅಪಘಾತ ಇಬ್ಬರ ಜೀವ ಕಸಿದಿದ್ದು, ಬದುಕು ದುರಂತ ಅಂತ್ಯ ಕಂಡಿದೆ. ಕ್ಯಾಲಿಫೋರ್ನಿಯಾದ ಅಲಬಾಮಾ ಬೆಟ್ಟಗುಟ್ಟ ಬಳಿಯಿರುವ ದುರ್ಗಮ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ರಸ್ತೆಯಿಂದಾಚೆಗೆ ಉರುಳಿ ಆಳವಾದ ಕಂದಕಕ್ಕೆ ಬಿದ್ದಿದೆ ಎಂದು ವರದಿಗಳು ತಿಳಿಸಿವೆ.
