ಉದಯವಾಹಿನಿ, Mh370 Search 2025: ನೀವು ಹಲವು ಬಾರಿ ವಿಮಾನ ಅಪಘಾತಗಳ ಬಗ್ಗೆ ಕೇಳಿರಬಹುದು. ಆದರೆ ಕಣ್ಮರೆಯಾದ ವಿಮಾನದ ಬಗ್ಗೆ ಎಂದಾದರೂ ಕೇಳಿದ್ದೀರಾ?. ಮಲೇಷ್ಯಾ ಏರ್ಲೈನ್ಸ್ ವಿಮಾನ MH370 ಸುಮಾರು ಹನ್ನೊಂದು ವರ್ಷಗಳ ಹಿಂದೆ ನಿಗೂಢವಾಗಿ ಕಣ್ಮರೆಯಾಗಿತ್ತು. ಆ ವಿಮಾನ ಇನ್ನೂ ಪತ್ತೆಯಾಗಿಲ್ಲ. ಪ್ರಪಂಚಾದ್ಯಂತ ಹಲವು ದೇಶಗಳು, ಕಂಪನಿಗಳು ಮತ್ತು ಸಂಸ್ಥೆಗಳು ವಿಮಾನವನ್ನು ಪತ್ತೆಹಚ್ಚಲು ಪ್ರಯತ್ನಿಸಿವೆ. ಆದರೆ ಯಾವುದೂ ಯಶಸ್ವಿಯಾಗಲಿಲ್ಲ. ಈಗ ಮತ್ತೆ ಹುಡುಕಾಟ ಶುರುವಾಗಿದೆ.ವಿಮಾನಕ್ಕಾಗಿ ನೀರಿನ ಅಡಿಯಲ್ಲಿ ಹುಡುಕಾಟ ಪುನರಾರಂಭಿಸಲಾಗುತ್ತಿದೆ. ಆದರೆ ಈ ಬಾರಿ, ಅತ್ಯಂತ ಮುಖ್ಯವಾದ ವಿಷಯವೆಂದರೆ ಹೆಚ್ಚು ಮುಂದುವರಿದ ವಿಜ್ಞಾನ ಮತ್ತು ಆಳ ಸಮುದ್ರ ತಂತ್ರಜ್ಞಾನವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಬಳಸಲಾಗುತ್ತಿದೆ. ಈ ಕಾರಣದಿಂದಾಗಿ ಬಹುಶಃ ಈ ಬಾರಿ ಮಲೇಷ್ಯಾ ಏರ್ಲೈನ್ಸ್ ಫ್ಲೈಟ್ MH370ರ ಅವಶೇಷಗಳು ಕಂಡುಬರಬಹುದು ಎಂಬ ಭರವಸೆ ಮೂಡಿದೆ.
ಈ ಕಾರ್ಯಾಚರಣೆ ಡಿಸೆಂಬರ್ 30ರಂದು ಅಂದ್ರೆ ಇಂದಿನಿಂದ ಪ್ರಾರಂಭವಾಗುತ್ತದೆ. ಬ್ರಿಟಿಷ್ ಮತ್ತು ಅಮೆರಿಕನ್ ಆಳ ಸಮುದ್ರ ತಂತ್ರಜ್ಞಾನ ಕಂಪನಿಯಾದ ಓಷನ್ ಇನ್ಫಿನಿಟಿ ಮತ್ತೊಮ್ಮೆ MH370 ವಿಮಾನವನ್ನು ಪತ್ತೆಹಚ್ಚುವ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಕಂಪನಿ ಈ ಹಿಂದೆ ವಿಮಾನದ ಪತ್ತೆಗೆ ಪ್ರಯತ್ನಿಸಿತ್ತು. ಆದರೆ ವಿಫಲವಾಯಿತು. ಈ ಬಾರಿ ಓಷನ್ ಇನ್ಫಿನಿಟಿ “ನೋ ಫೈಂಡ್, ನೋ ಫೀ” ಎಂಬ ಮಾದರಿಯಲ್ಲಿ ಕಾರ್ಯಾಚರಣೆಯನ್ನು ಒಪ್ಪಿಕೊಂಡಿದೆ. ಇದರರ್ಥ ಕಂಪನಿ ಸಮುದ್ರದ ಆಳದಲ್ಲಿ ವಿಮಾನವನ್ನು ಪತ್ತೆ ಹಚ್ಚಿದರೆ ಮಾತ್ರ ಮಲೇಷ್ಯಾ ಸರ್ಕಾರದಿಂದ ಹಣ ಪಡೆಯುತ್ತದೆ.ಆ ರಾತ್ರಿ ನಿಖರವಾಗಿ ಆದದ್ದೇನು?: 2014ರ ಮಾರ್ಚ್ 8ರಂದು ಕೌಲಾಲಂಪುರದಿಂದ ಬೀಜಿಂಗ್‌ಗೆ ಪ್ರಯಾಣಿಸುತ್ತಿದ್ದ ಬೋಯಿಂಗ್ 777 MH370 ವಿಮಾನ ಟೇಕ್ ಆಫ್ ಆದ ಸುಮಾರು 45 ನಿಮಿಷಗಳ ನಂತರ ರಾಡಾರ್‌ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಸುಮಾರು ಒಂದೂವರೆ ಗಂಟೆಗಳ ನಂತರ ಮಿಲಿಟರಿ ರಾಡಾರ್, ವಿಮಾನ ತಪ್ಪು ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಪತ್ತೆ ಮಾಡಿದೆ. ಅಂದಿನಿಂದ ಅದರ ಸ್ಥಳವನ್ನು ಪತ್ತೆಹಚ್ಚಲು ಯಾರಿಗೂ ಸಾಧ್ಯವಾಗಿಲ್ಲ. ಒಟ್ಟು 239 ಜನರು ವಿಮಾನದಲ್ಲಿದ್ದರು ಮತ್ತು ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ನಿರ್ಣಾಯಕ ಕುರುಹು ಕೂಡಾ ಸಿಕ್ಕಿಲ್ಲ. ಇದನ್ನು ವಾಯುಯಾನ ಇತಿಹಾಸದಲ್ಲೇ ಅತ್ಯಂತ ನಿಗೂಢ ಅಪಘಾತವೆಂದು ಪರಿಗಣಿಸಲಾಗಿದೆ.
