ಉದಯವಾಹಿನಿ, ಪರಮರಿಬೊ : ಸುರಿನಾಮ್‌ನ ರಾಜಧಾನಿ ಪರಮರಿಬೊ ನಗರದ ಹೊರವಲಯದಲ್ಲಿ ನಡೆದ ಚಾಕು ದಾಳಿಯಲ್ಲಿ ಐವರು ಮಕ್ಕಳು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.ಪರಮರಿಬೊದ ಪೂರ್ವದಲ್ಲಿರುವ ರಿಚೆಲಿಯು ನಗರದಲ್ಲಿ ಈ ಘಟನೆ ನಡೆದಿದೆ. ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ 43 ವರ್ಷದ ವ್ಯಕ್ತಿ ಮಕ್ಕಳನ್ನು ಕರೆದೊಯ್ಯುವ ವಿಷಯದಲ್ಲಿ ಪತ್ನಿಯೊಂದಿಗೆ ಫೋನಿನಲ್ಲಿ ಜಗಳವಾಡಿದ್ದಾನೆ. ಆಗ ಪತ್ನಿ ಮಕ್ಕಳನ್ನು ಕರೆದೊಯ್ಯಲು ತಾನು ಬರುವುದಿಲ್ಲ, ಬೇರೆಯವರನ್ನು ಕಳಿಸುತ್ತೇನೆ ಎಂದಿದ್ದಾಳೆ. ಇದರಿಂದ ಆಕ್ರೋಶಗೊಂಡ ವ್ಯಕ್ತಿ ಚೂರಿಯಿಂದ ತನ್ನ ನಾಲ್ವರು ಮಕ್ಕಳ ಮೇಲೆ ದಾಳಿ ನಡೆಸಿದ್ದು ಮಕ್ಕಳು ಮೃತಪಟ್ಟಿವೆ. ತಡೆಯಲು ಪ್ರಯತ್ನಿಸಿದ ನೆರೆಮನೆಯವರ ಮೇಲೆಯೂ ದಾಳಿ ನಡೆಸಿದ್ದು ನೆರೆಮನೆಯವರ ಮಗು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಮತ್ತೊಂದು ಮಗು ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೆಯೂ ಆರೋಪಿ ಚೂರಿಯಿಂದ ದಾಳಿ ನಡೆಸಲು ಪ್ರಯತ್ನಿಸಿದ್ದಾನೆ. ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿಗೂ ಗಾಯವಾಗಿದೆ. ಬಳಿಕ ಆತನನ್ನು ಬಂಧಿಸಿ ಚಿಕಿತ್ಸೆ ಒದಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!