ಉದಯವಾಹಿನಿ, ದಕ್ಷಿಣದ ಪ್ರತ್ಯೇಕತಾವಾದಿಗಳಿಗೆ ವಿದೇಶಿ ಬೆಂಬಲಿತ ಹಡಗುಗಳು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಆರೋಪಿಸಿ ಸೌದಿ ಅರೇಬಿಯ ನೇತೃತ್ವದ ಮೈತ್ರಿಕೂಟವು ಮಂಗಳವಾರ ಬೆಳಿಗ್ಗೆ ಯೆಮೆನ್‌ನ ಮುಕಲ್ಲಾ ಬಂದರಿನ ಮೇಲೆ ದಾಳಿ ನಡೆಸಿದೆ ಎಂದು ವರದಿ ಮಾಡಿದೆ.
ತನ್ನ ರಾಷ್ಟ್ರೀಯ ಭದ್ರತೆಯು ತನಗೆ ಪರಮೋಚ್ಚವಾಗಿದ್ದು, ಅದನ್ನು ರಕ್ಷಿಸಲು ತಾನು ಬದ್ಧವಾಗಿದ್ದೇನೆ ಎಂದು ದಾಳಿಯ ಬಳಿಕ ಸೌದಿ ಅರೇಬಿಯ ಹೇಳಿದೆ. ಯೆಮೆನ್‌ನಲ್ಲಿ ವಾಹನಗಳು ಮತ್ತು ಸರಕುಗಳ ಮೇಲೆ ದಾಳಿ ನಡೆಸಲಾಗಿದ್ದು, ಇವುಗಳನ್ನು ವಿದೇಶಿ ಸೇನೆಯು ಪ್ರತ್ಯೇಕತಾವಾದಿಗಳಿಗೆ ಪೂರೈಸಿತ್ತು ಎಂದು ಸೌದಿ ಪ್ರತಿಪಾದಿಸಿದೆ.
ಹದ್ರಾಮೌಟ್ ಪ್ರಾಂತ್ಯದಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುವ ವಿರುದ್ಧ ಪ್ರತ್ಯೇಕತಾವಾದಿ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್‌ಗೆ (ಎಸ್‌ಟಿಸಿ) ಸೌದಿ ಎಚ್ಚರಿಕೆ ನೀಡಿದ ಕೆಲವೇ ದಿನಗಳ ಬಳಿಕ ಯೆಮೆನ್‌ನ ಮುಕಲ್ಲಾ ಬಂದರಿನಲ್ಲಿ ಮೈತ್ರಿಕೂಟವು ಸೀಮಿತ ಮಿಲಿಟರಿ ಕಾರ್ಯಾಚರಣೆ’ಯನ್ನು ನಡೆಸಿದೆ. ಯೆಮೆನ್‌ನ ಸೌದಿ ಬೆಂಬಲಿತ ಅಧ್ಯಕ್ಷೀಯ ಮಂಡಳಿಯು ಯುಎಇ ಎಸ್‌ಟಿಸಿಗೆ ನೆರವನ್ನು ಪೂರೈಸಿತ್ತು ಎಂದು ಆರೋಪಿಸಿದೆ. ಕೊಲ್ಲಿ ಅರಬ್ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಯುಎಇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಾನು ಆಶಿಸಿರುವುದಾಗಿ ಸೌದಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
