ಉದಯವಾಹಿನಿ, ಅಮೆರಿಕದ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದರು. ” ಘೋಷಣೆ ಮಾಡುತ್ತಾ ಅಧಿಕಾರ ಹಿಡಿದ ಅವರು ಹೊರದೇಶಗಳಿಂದ ಆಮದು ಮಾಡುವ ವಸ್ತುಗಳಿಗೆ ಪ್ರತಿ ಸುಂಕ ಹೇರುವ, ವಲಸಿಗರು ಅದರಲ್ಲೂ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ, ಎಚ್1ಬಿ ವೀಸಾ ನಿರ್ಬಂಧ, ವಿದೇಶಿ ಉದ್ಯೋಗಿಗಳಿಗೆ ಕಡಿವಾಣ, ಹೊರದೇಶಗಳಲ್ಲಿ ಬಂಡವಾಳ ಹೂಡಲು ನಿರ್ಧರಿಸಿರುವ ಕಂಪನಿಗಳನ್ನು ಕಠಿಣ ಪದಗಳಿಂದ ಟೀಕಿಸಿ ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾದರು. ಅವರ ಸುಂಕ ಹೇರಿಕೆಯು ಕೆನಡಾ, ಮೆಕ್ಸಿಕೊ, ಭಾರತ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟಿಗೂ ಕಾರಣವಾಯಿತು. ಚೀನಾದೊಂದಿಗೆ ನೇರ ಸುಂಕ ಸಮರಕ್ಕೂ ಕಾರಣವಾಯಿತು. ಸುಂಕ ಹೇರಿಕೆಯನ್ನು ಮುಂದಿಟ್ಟುಕೊಂಡು ಭಾರತ ಸೇರಿದಂತೆ ಹಲವು ದೇಶಗಳನ್ನು ಬೆದರಿಸುವ ತಂತ್ರವನ್ನೂ ಅಮೆರಿಕ ಸರ್ಕಾರ ಅನುಸರಿಸಿತು.
ಲಿಬರಲ್ ಪಕ್ಷದ ನಾಯಕ ಮಾರ್ಕ್ ಕ್ಯಾರ್ನಿ ಅವರು ಕೆನಡಾದ 24ನೇ ಪ್ರಧಾನಿಯಾಗಿ ಮಾರ್ಚ್‌ನಲ್ಲಿ ಅಧಿಕಾರ ವಹಿಸಿಕೊಂಡರು. 10 ವರ್ಷ ಪಕ್ಷ ಹಾಗೂ ದೇಶದ ನಾಯಕತ್ವ ವಹಿಸಿದ್ದ ಜಸ್ಟಿನ್ ಟೂಡೊ ಅವರು ಪ್ರಧಾನಿ ಸ್ಥಾನಕ್ಕೆ ರಾಜಕೀಯ ಬಿಕ್ಕಟ್ಟಿನ ಕಾರಣಕ್ಕೆ ರಾಜಿನಾಮೆ ನೀಡಿದ ನಂತರ ಕ್ಯಾರ್ನಿ ಪ್ರಧಾನಿ ಹುದ್ದೆಗೆ ಏರಿದರು. ನಂತರ ನಡೆದ ಸಂಸತ್ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದರು. ಟ್ಯೂಡೊ ಅವಧಿಯಲ್ಲಿ ಭಾರತದೊಂದಿಗೆ ಹಳಸಿದ್ದ ರಾಜತಾಂತ್ರಿಕ ಸಂಬಂಧವನ್ನು ಮತ್ತೆ ಹಳಿಗೆ ಮರಳಿಸಲು ಮಾರ್ಕ್ ಯತ್ನಿಸುತ್ತಿದ್ದಾರೆ.
ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದಾದ ಜಪಾನ್‌ನಲ್ಲಿ ಈ ವರ್ಷ ರಾಜಕೀಯ ಅಸ್ಥಿರತೆ ಕಂಡು ಬಂತು. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕಿಯಾಗಿ ಆಯ್ಕೆಯಾದ ಸನೇ ತಕೈಚಿ ಅವರು ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ತಕೈಚಿ ಅವರು ಜಪಾನಿನ ಮೊದಲ ಮಹಿಳಾ ಪ್ರಧಾನಿ. ಅದಕ್ಕೂ ಮೊದಲು ಒಂದು ವರ್ಷ ಪ್ರಧಾನಿಯಾಗಿದ್ದ ಶಿಗೇರು ಇಶಿಬಾ ನೇತೃತ್ವದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಪಕ್ಷವು ಸೋಲು ಕಂಡಿದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಸೇನಾ ಸಂಘರ್ಷ ನಡೆಯುತ್ತಿದ್ದ ಸಂದರ್ಭದಲ್ಲೇ ಥಾಯ್ಲೆಂಡ್ ಪ್ರಧಾನಿಯಾಗಿದ್ದ ಪ್ಯಾಂಟೋಗ್ಟರ್ನ್ ಶಿನವಾತ್ರ ಅವರು ಕಾಂಬೋಡಿಯಾದ ಮಾಜಿ ನಾಯಕ ಹುನ್ ಸೆನ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ವಿವರ ಸೋರಿಕೆಯಾದ ಕಾರಣ ಪ್ರಕರಣದಲ್ಲಿ ಶಿನವಾತ್ರ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಅಲ್ಲಿನ ಸಾಂವಿಧಾನಿಕ ನ್ಯಾಯಾಲಯವು ತೀರ್ಪು ನೀಡಿತು.
