ಉದಯವಾಹಿನಿ ಶ್ರೀಲಂಕಾ ವಿರುದ್ಧದ ಮಹಿಳಾ ಟಿ20ಐ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಶಫಾಲಿ ವರ್ಮಾ ಹಾಗೂ ರೇಣುಕಾ ಸಿಂಗ್ ಅವರು ಐಸಿಸಿ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಈ ಸರಣಿಯಲ್ಲಿ ಶಫಾಲಿ ವರ್ಮಾ ಅತಿ ಹೆಚ್ಚು ರನ್ ಗಳಿಸಿದ್ದರೆ, ರೇಣುಕಾ ಸಿಂಗ್ ಮೂರನೇ ಟಿ20ಐ ಪಂದ್ಯದಲ್ಲಿ ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ. ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಶಫಾಲಿ ವರ್ಮಾ ನಾಲ್ಕು ಸ್ಥಾನಗಳಲ್ಲಿ ಏರಿಕೆ ಕಂಡು 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇವರು ನಾಲ್ಕನೇ ಟಿ20ಐ ಪಂದ್ಯದಲ್ಲಿ 46 ಎಸೆತಗಳಲ್ಲಿ 79 ರನನ್‌ಗಳನ್ನು ಸಿಡಿಸಿದ್ದರು.
ಶಫಾಲಿ ವರ್ಮಾ ಸ್ಪೋಟಕ ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 221 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ 30 ರನ್‌ಗಳಿಂದ ಗೆದ್ದು ಬೀಗಿತ್ತು. ಬಲಗೈ ಬ್ಯಾಟ್ಸ್‌ವುಮೆನ್ ಸದ್ಯ 60 ಪಾಯಿಂಟ್ಸ್ ರೇಟಿಂಗ್ ಹೊಂದಿದ್ದಾರೆ. ಆಸ್ಟ್ರೇಲಿಯಾದ ಬೆತ್ ಮೂನಿ ಅಗ್ರ ಸ್ಥಾನದಲ್ಲಿದ್ದಾರೆ. ಭಾರತದ ಉಪ ನಾಯಕಿ ಸ್ಮೃತಿ ಮಂಧಾನಾ ಅವರು ಮೂರನೇ ಸ್ಥಾನದಲ್ಲಿದ್ದರೆ, ಹರ್ಮನ್‌ಪ್ರೀತ್ ಕೌರ್ 15ನೇ ಶ್ರೇಯಾಂಕದಲ್ಲಿದ್ದಾರೆ.
ಇನ್ನು ಭಾರತ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಅವರು ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ 7ನೇ ಶ್ರೇಯಾಂಕಕ್ಕೆ ಲಗ್ಗೆ ಇಟ್ಟಿದ್ದಾರೆ. ಮೂರನೇ ಟಿ20ಐ ಪಂದ್ಯದಲ್ಲಿ ಅರುಂಧತಿ ರೆಡ್ಡಿ ಅವರ ಸ್ಥಾನದಲ್ಲಿ ಆಡಿದ್ದ ರೇಣುಕಾ ಸಿಂಗ್ ಅವರು 21 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಭಾರತ ಮಹಿಳಾ ತಂಡದ 8 ವಿಕಟ್‌ಗಳ ಗೆಲುವಿಗೆ ನೆರವು ನೀಡಿದ್ದರು.
