ಉದಯವಾಹಿನಿ, ಜೈಪುರ: ಇಲ್ಲಿನ ಬರೋನಿ ಪೊಲೀಸರು ಹೊಸ ವರ್ಷಕ್ಕೂ ಮುನ್ನ ಭರ್ಜರಿ ಬೇಟೆ ನಡೆಸಿದ್ದಾರೆ. ಕಾರೊಂದರಲ್ಲಿ 150 ಕೆ.ಜಿ ಅಮೋನಿಯಂ ನೈಟ್ರೇಟ್, 200 ಸ್ಫೋಟಕ ಬ್ಯಾಟರಿ, 1,100 ಮೀ. ವಿದ್ಯುತ್ ತಂತಿಯನ್ನು ವಶಕ್ಕೆ ಪಡೆದು, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಸುರೇಂದ್ರ ಮತ್ತು ಸುರೇಂದ್ರ ಮೋಚಿ ಎಂದು ಗುರುತಿಸಲಾಗಿದೆ. ಇಬ್ಬರು ಮಾರುತಿ ಸಿಯಾಜ್ ಕಾರಿನಲ್ಲಿ ಬುಂಡಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಟೋಂಕ್-ಜೈಪುರ ಹೆದ್ದಾರಿಯಲ್ಲಿ ಹೊಸ ವರ್ಷದ ಹಿನ್ನೆಲೆ ತಪಾಸಣೆ ನಡೆಸುತ್ತಿದ್ದಾಗ ಸ್ಫೋಟಕಗಳು ಪತ್ತೆಯಾಗಿವೆ.
ಈ ಕುರಿತು ಡಿಎಸ್ಪಿ ಮೃತ್ಯುಂಜಯ್ ಮಿಶ್ರಾ ಮಾಹಿತಿ ನೀಡಿದ್ದು, ಬುಂಡಿ ಕಡೆಗೆ ತೆರಳುತ್ತಿದ್ದ ಕಾರನ್ನು ತಡೆಹಿಡಿದು ಪರಿಶೀಲನೆ ನಡೆಸಿದಾಗ ಹಲವು ಚೀಲಗಳು ಪತ್ತೆಯಾಗಿದ್ದವು. ಆ ಚೀಲಗಳಲ್ಲಿ ಸುಮಾರು 150 ಕೆ.ಜಿ ಅಮೋನಿಯಂ ನೈಟ್ರೇಟ್ ಸಿಕ್ಕಿದೆ. ಜೊತೆಗೆ 200 ಸ್ಫೋಟಕ ಬ್ಯಾಟರಿಗಳು ಹಾಗೂ 1,100 ಮೀಟರ್ ಉದ್ದದ ವಿದ್ಯುತ್ ತಂತಿಯನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಆರೋಪಿಗಳ ಮೂಲ, ಇದೆಲ್ಲವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದರು? ಯಾವ ಉದ್ದೇಶಕ್ಕಾಗಿ ಕೊಂಡೊಯ್ಯುತ್ತಿದ್ದರು? ಎನ್ನುವ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
