ಉದಯವಾಹಿನಿ, ಜೇವರ್ಗಿ: ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ. ಸಂಗನಗೌಡ ಶರಣ್ ಗೌಡ ಪಾಟೀಲ್, ಹಣಕ್ಕಾಗಿ ದುಡಿಯದೆ ಬಡವರ ಆರೋಗ್ಯಕ್ಕಾಗಿ ದುಡಿದ ಎಂದು ತಾಲೂಕಿನ ಜನರು ಮಾತನಾಡುತ್ತಾರೆ.
ಡಾ. ಎಸ್ ಎಸ್ ಪಾಟೀಲ್ ಮೂಲತಃ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದವರು. 1980ರ ಆಸು ಪಾಸಿನಲ್ಲಿ ಜೇವರ್ಗಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರಾಗಿ ಆಗಮಿಸಿದರು. 2001 02 ರಲ್ಲಿ ವಯೋನಿವೃತ್ತಿ ಹೊಂದಿದರು. ಜೇವರ್ಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಸ್ ಎಸ್ ಪಾಟೀಲ್ ಎಂದೆ ಚಿರಪರಿಚಿತರಾದ ವೈದ್ಯರು ಗುರುವಾರ ಸಂಜೆ ಹೃದಯಘಾತದಿಂದ ವಿಧಿವಶರಾದರು. ತಾಲೂಕಿನ ಬಡ ರೋಗಿಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಇಂದಿನ ದಿನಮಾನದಲ್ಲಿ ಹಣಕ್ಕಾಗಿ ದುಡಿಯುವ ವೈದರೆ ಹೆಚ್ಚು. ಅಂತಹ ಹಣಕ್ಕಾಗಿ ದುಡಿಯುವ ವೈದ್ಯರ ಮಧ್ಯೆ ಬಡರೋಗಿಗಳಿಗಾಗಿ ಸೇವೆ ಸಲ್ಲಿಸಿದ ಏಕೈಕ ವೈದ್ಯ ಎಂದರು ತಪ್ಪಾಗಲಾರದು.ಅದು ಎಂತಹದ್ದೇ ದೊಡ್ಡ ರೋಗವಿರಲಿ ಡಾ. ಎಸ್ ಎಸ್ ಪಾಟೀಲ್ ಹತ್ತಿರ ಹೋದರೆ ಸಾಕು ನಮಗೆ ಆರಾಮವಾಗುತ್ತದೆ ಎಂದು ಜನ ನಂಬುತ್ತಿದ್ದರು. ಅವರ ಕೈಗುಣವೋ ಅಥವಾ ಅವರ ಮೇಲಿರುವ ನಂಬಿಕೆಯು ತಿಳಿದಿಲ್ಲ. ಅದೆಷ್ಟು ರೋಗಿಗಳು ಅವರ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಇಂದು ಅವರ ಅಗಲಿಕೆಯ ಸುದ್ದಿ ಕೇಳಿದ ಜೇವರ್ಗಿ ತಾಲೂಕ ವೇ ಒಂದು ಕ್ಷಣ ಮೌನವಾಗಿದೆ. ಎಂತಹದ್ದೇ ಅನಾರೋಗ್ಯವಿದ್ದರೂ ಅವರು ಎದುರಿಗೆ ಬಂದರೆ ಸಾಕು ಇವರಿಂದ ನನ್ನ ಅನಾರೋಗ್ಯವೆಲ್ಲವೂ ದೂರವಾಗುತ್ತದೆ ಎನ್ನುತ್ತಿದ್ದವರಿಗೆ ಇಂದು ಅವರೇ ಕಾಣದಂತಾಗಿದ್ದಾರೆ. ತಾಲೂಕಿನ ಬಡವರಿಗೆ ದೇವರಂತಾಗಿದ್ದ ವೈದ್ಯ ಇನ್ನಿಲ್ಲವೆಂಬ ಸಂಗತಿ ಅತಿವ ನೋವನ್ನುಂಟು ಮಾಡಿದೆ.
ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಜೇವರ್ಗಿ ಪಟ್ಟಣದ ಹಳೆ ತರ್ಸಿಲ್ ಆವರಣದಲ್ಲಿ ಡಾಕ್ಟರ್ ಎಸ್ ಎಸ್ ಪಾಟೀಲ್ ರವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಿಗ್ಗೆ ತಾಲೂಕಿನ ನಾನಾ ಹಳ್ಳಿಗಳಿಂದ ಜನಸಾಗರವೇ ಹರಿದು ಬಂದರು ಆಶ್ಚರ್ಯವಿಲ್ಲ. ಅವರ 28 ವರ್ಷದ ಸೇವೆ ಜನರ ಮನಸಲ್ಲಿ ಅಜರಾಮರ. ಅಂತಹ ವೈದ್ಯರು ಮತ್ತೊಮ್ಮೆ ಹುಟ್ಟಿ ಬರಲಿ. ನಮ್ಮ ತಾಲೂಕಿಗೆ ಬಂದು ಸೇವೆ ಸಲ್ಲಿಸಲಿ ಎಂಬುದೇ ತಾಲೂಕಿನ ಜನರು ಆ ದೇವರಲ್ಲಿ ಕೋರುತ್ತಿದ್ದಾರೆ.
