ಉದಯವಾಹಿನಿ, ಬೆಂಗಳೂರು: ಕೋಗಿಲು ಲೇಔಟ್‌ಗೆ ಅಕ್ರಮವಾಗಿ ಹೇಗೆ ಬಂದು ಜನರು ಸೇರಿಕೊಂಡರು ಅಂತ ಮೊದಲು ತನಿಖೆ ಆಗಬೇಕು ಎಂದು ಮಾಜಿ ಸಚಿವ, ಶಾಸಕ ಸುರೇಶ್ ಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕೋಗಿಲು ಲೇಔಟ್ ಅಕ್ರಮ ಮನೆ ಸಕ್ರಮ ಮಾಡಿದ ಸರ್ಕಾರದ ಕ್ರಮ ವೇಣುಗೋಪಾಲ್ ಸಮರ್ಥನೆ ಮಾಡಿಕೊಂಡ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವೇಣುಗೋಪಾಲ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವೇಣುಗೋಪಾಲ್ ಸಮರ್ಥನೆ ಮಾಡೋಕೆ ಕಾರಣ ಇದೆ.
ಕೋಗಿಲು ಲೇಔಟ್ ಪ್ರಕರಣ ಕೇವಲ ಕೇರಳ ಚುನಾವಣೆ ಅನುಕಂಪದ ಆಧಾರಿತ ಕ್ರಮ. ಕೇರಳದಲ್ಲಿ ಚುನಾವಣೆಯಲ್ಲಿ ಮಹತ್ವ ಸಿಗಬೇಕು ಅಂತ ಕೇರಳ ಸಿಎಂ ಜೊತೆಗೆ ವೇಣುಗೋಪಾಲ್ ಮಾತನಾಡುತ್ತಿದ್ದಾರೆ. ಇದನ್ನ ಕಾಂಪಿಟೇಟಿವ್ ಪಾಲಿಟಿಕ್ಸ್ ಅಂತಾರೆ ಎಂದು ಕಿಡಿಕಾರಿದರು. ಅಕ್ರಮ ಮನೆ ಅಂತ ಸರ್ಕಾರ ಹೇಳುತ್ತಿದೆ. 15-20 ವರ್ಷಗಳಿಂದ ಇದ್ದಾರೆ ಅಂತಾರೆ. ಇದ್ಯಾವುದೂ ಪರಿಶೀಲನೆ ಮಾಡದೇ ಮನೆ ಕೊಡುತ್ತೇವೆ ಅನ್ನೋದು ಕಾಂಗ್ರೆಸ್ ನಾಯಕತ್ವವನ್ನ ಪುಷ್ಟೀಕರಣ ಮಾಡಲು ರಾಜ್ಯ ಸರ್ಕಾರ ಮಾಡುತ್ತಿರುವ ನೀತಿ ಇದು. ಸರ್ಕಾರದ ನಡೆಯಿಂದ ಕರ್ನಾಟಕದ ನೈಜ ಸಂತ್ರಸ್ತರಿಗೆ ಅನ್ಯಾಯ ಆಗುತ್ತಿದೆ. ಕರ್ನಾಟಕದ ಜನತೆ ಕಣ್ಣಿಗೆ ಸುಣ್ಣ, ಕೇರಳದವರಿಗೆ ಬೆಣ್ಣೆ ಇದು ಈ ಸರ್ಕಾರದ ನೀತಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.
