ಉದಯವಾಹಿನಿ, ಭೋಪಾಲ್ : ಮಧ್ಯ ಪ್ರದೇಶದ ಇಂದೋರ್ ನ ಭಗೀರಥಪುರ ) ಪ್ರದೇಶದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಜನರ ಜೀವಕ್ಕೆ ಕಂಟಕವಾಗಿ ಬದಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳ ಹಸುಗೂಸೊಂದು ಬಲಿಯಾಗಿದೆ. ಈ ದುರಂತದ ಬಳಿಕ ನಗರಪಾಲಿಕೆ ನಿರಂತರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಮಗುವಿನ ತಾಯಿ ಸಾಧನಾ ಸಾಹು ಅವರ ಪ್ರಕಾರ, “ಹಾಲಿಗೆ ಮನೆಯ ನೀರನ್ನು ಮಿಶ್ರಣ ಮಾಡಿ ಮಗುವಿಗೆ ಕುಡಿಸಿದ ಬಳಿಕ ತೀವ್ರ ವಾಂತಿ, ಅತಿಸಾರ ಕಾಣಿಸಿಕೊಂಡಿತು. ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ವೈದ್ಯರು ಈಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದರು” ಎಂಬುದುದಾಗಿ ವಿವರಿಸಿದ್ದಾರೆ. “ನನ್ನ ಮಗು ನಮ್ಮಿಂದ ದೂರವಾಗಿದೆ… ಇನ್ನೆಷ್ಟು ಅಮಾಯಕರ ಜೀವ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ. 10 ವರ್ಷಗಳ ಪ್ರಾರ್ಥನೆಯ ನಂತರ ಈ ಮಗು ಹುಟ್ಟಿತ್ತು” ಎಂದು ಸಾಧನಾ ಕಣ್ಣೀರಿಟ್ಟಿದ್ದಾರೆ.
