ಉದಯವಾಹಿನಿ, ನವದೆಹಲಿ: ಹೊಸ ವರ್ಷ ಸ್ವಾಗತಿಸುವ ಹೊತ್ತಿನಲ್ಲೇ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸರ್ವಪ್ರಿಯ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳ ತಂಡ ಸುಮಾರು 14 ಕೋಟಿ ಮೌಲ್ಯದ ನಗದು, ಆಭರಣಗಳನ್ನ ಜಪ್ತಿ ಮಾಡಿದೆ.ಬರೋಬ್ಬರಿ 5.12 ಕೋಟಿ ರೂ. ನಗದು, 8.80 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ತುಂಬಿದ್ದ ಸೂಟ್‌ಕೇಸ್ ಮತ್ತು 35 ಕೋಟಿ ರೂ. ಆಸ್ತಿಗೆ ಸಂಬಂಧಿಸಿದ ಚೆಕ್ ಬುಕ್, ಇತರ ದಾಖಲೆಗಳನ್ನ ವಶಪಡಿಸಿಕೊಂಡಿದೆ.
ತಲೆಮರೆಸಿಕೊಂಡಿರುವ ಹರಿಯಾಣ ಮೂಲದ ರಾವ್ ಇಂದರ್ಜಿತ್ ಸಿಂಗ್ ಯಾದವ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ದಕ್ಷಿಣ ದೆಹಲಿಯ ಸರ್ವಪ್ರಿಯ ವಿಹಾರ್‌ನಲ್ಲಿರುವ ವಸತಿ ಆವರಣಕ್ಕೆ ಇ.ಡಿ ದಾಳಿ ನಡೆಸಿದೆ. ಯುಎಇಯಿಂದ ಯಾದವ್ ಕಾರ್ಯನಿರ್ವಹಿಸುತ್ತಿದ್ದು, ಆತನ ಸಹಚರ ಅಮನ್ ಕುಮಾರ್‌ಗೆ ಸಂಬಂಧಿಸಿದ ಮನೆ ಇದಾಗಿದೆ. ಯಾದವ್‌ಗೆ ಸಂಬಂಧಿಸಿದ ಗುರುಗ್ರಾಮ್ ಮತ್ತು ರೋಹ್ಟಕ್‌ನ ಹಲವು ಸ್ಥಳಗಳ ಮೇಲೂ ಇಡಿ ದಾಳಿ ನಡೆಸಿದೆ.
ಮಂಗಳವಾರ ಶುರುವಾದ ದಾಳಿ ಇನ್ನೂ ಮುಂದುವರಿದಿದೆ. ಇಂದು ಬೆಳಗ್ಗೆ ನೋಟು ಎಣಿಕೆ ಯಂತ್ರಗಳೊಂದಿಗೆ ಆಗಮಿಸಿದ ಬ್ಯಾಂಕ್ ಅಧಿಕಾರಿಗಳು ಅಪಾರ ಪ್ರಮಾಣದ ನಗದು, ಆಭರಣ, ಬ್ಯಾಂಕ್ ಚೆಕ್ ಪುಸ್ತಕ ಹಾಗೂ ಇತರ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ಕಂತೆ ಕಂತೆಯ ಹಣದ ರಾಶಿ ಹಾಗೂ ವಜ್ರಾಭರಣ ತುಂಬಿದ ಸೂಟ್ ಕೇಸ್ ಇರುವ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
