ಉದಯವಾಹಿನಿ, ಬೆಂಗಳೂರು: ಮಾಜಿ ಸಚಿವರು ಮತ್ತು ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಪ್ರಾಣಾಪಾಯವಿದ್ದು ಕೂಡಲೇ ಅವರಿಗೆ ಪೊಲೀಸ್ ರಕ್ಷಣೆ ಕೊಡಬೇಕು. ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ಮಾಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬೆಂಬಲಿಗರ ಮನೆಗೆ ಅಕ್ರಮವಾಗಿ ನುಗ್ಗಿದ ಕಾಂಗ್ರೆಸ್ಸಿನವರನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಬಳ್ಳಾರಿ ಘಟನಾವಳಿ, ಒಂದು ಸಾವಿಗೆ ಶಾಸಕ ಭರತ್ ರೆಡ್ಡಿಯೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು. ಮಾಜಿ ಸಚಿವ ಮತ್ತು ಶಾಸಕ ಜನಾರ್ದನ ರೆಡ್ಡಿ ಮುಗಿಸಲು ಕಾಂಗ್ರೆಸ್ಸಿನವರು ತೀರ್ಮಾನಿಸಿದ್ದರು ಎಂದು ಆರೋಪಿಸಿದರು.
ಕಾಂಗ್ರೆಸ್ಸಿನ ಗೂಂಡಾಗಳು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ಗುಂಡಿನ ದಾಳಿ ಮಾಡಿರುವುದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಹೊಸ ವರ್ಷಾಚರಣೆ ವೇಳೆ ಮುಖ್ಯಮಂತ್ರಿಗಳು ದುರ್ಘಟನೆ ನಡೆಯದಂತೆ ಪೊಲೀಸರು ನೋಡಲಿದ್ದಾರೆಂದು ಭರವಸೆಯ ಮಾತಾಡಿದ್ದಾರೆ. ಅವರು ಹೇಳಿದ ಒಂದೇ ದಿನಕ್ಕೆ ಬಳ್ಳಾರಿಯಲ್ಲಿ ಗುಂಡಿನ ದಾಳಿ ನಡೆದಿದೆ. ಇದು ರಾಜ್ಯದ ಕಾನೂನು- ಸುವ್ಯವಸ್ಥೆ ಕುಸಿತಕ್ಕೆ ಕೈಗನ್ನಡಿ ಎಂದರು.
