ಉದಯವಾಹಿನಿ, ಜೈಪುರ: ದೇಶದಲ್ಲಿ ವೈಟ್-ಕಾಲರ್ ಉಗ್ರವಾದ ಹೆಚ್ಚುತ್ತಿದೆ. ಉನ್ನತ ಶಿಕ್ಷಣ ಪಡೆದವರೇ ಸಮಾಜ ಮತ್ತು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೆಲವರು ಒಂದು ಕೈಯಲ್ಲಿ ಡಿಗ್ರಿ ಹಿಡಿದು ಜೇಬಿನಲ್ಲಿ ಆರ್‌ಡಿಎಕ್ಸ್ ಇಟ್ಟುಕೊಳ್ಳುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿರುವ ಭೂಪಾಲ್ ನೋಬಲ್ಸ್ ವಿಶ್ವವಿದ್ಯಾಲಯದ 104ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಘಟನೆಯನ್ನು ಉದಾಹರಣೆಯಾಗಿ ತೋರಿಸಿದರು.
ದೆಹಲಿ ಬಾಂಬ್ ಸ್ಫೋಟದ ಆರೋಪಿಗಳು ವೈದ್ಯರು ಕೈಯಲ್ಲಿ ಡಿಗ್ರಿ ಹಿಡಿದು, ಜೇಬಿನಲ್ಲಿ ಆರ್‌ಡಿಎಕ್ಸ್ ಇಟ್ಟುಕೊಂಡವರು. ಇದು ಜ್ಞಾನದೊಂದಿಗೆ ಮೌಲ್ಯಗಳು ಮತ್ತು ನೈತಿಕತೆಯ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. 2025ರ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಬಾಂಬ್ ಸ್ಫೋಟದಲ್ಲಿ 15 ಜನರು ಮೃತಪಟ್ಟಿದ್ದರು. ಉಗ್ರರು ಅನಕ್ಷರಸ್ಥರಲ್ಲ, ಅವರಲ್ಲಿ ವಿಶ್ವವಿದ್ಯಾಲಯ ಡಿಗ್ರಿ ಹೊಂದಿದವರೂ ಇದ್ದಾರೆ. ಆದರೆ ಮೌಲ್ಯಗಳ ಕೊರತೆಯಿಂದ ಅಂತಹ ಕೃತ್ಯಗಳಲ್ಲಿ ತೊಡಗುತ್ತಾರೆ. ಕ್ಷಣದ ಉದ್ದೇಶ ಕೇವಲ ವೃತ್ತಿಪರ ಯಶಸ್ಸಲ್ಲ, ನೈತಿಕತೆ, ಮಾನವೀಯತೆ ಮತ್ತು ಧರ್ಮದ ಬೆಳವಣಿಗೆಯೂ ಆಗಿದೆ. ಜ್ಞಾನದೊಂದಿಗೆ ವಿನಮ್ರತೆ, ಚರಿತ್ರೆ ಮತ್ತು ಧರ್ಮವನ್ನು ಕಲಿಸದ ಶಿಕ್ಷಣ ವ್ಯವಸ್ಥೆ ಅಪೂರ್ಣ ಎಂದು ಅವರು ಒತ್ತಿ ಹೇಳಿದರು. ದೇವಾಲಯ, ಮಸೀದಿ ಅಥವಾ ಚರ್ಚ್‌ಗೆ ಹೋಗಿ ಪ್ರಾರ್ಥಿಸುವುದು ಧರ್ಮವಲ್ಲ. ಕರ್ತವ್ಯ ಪಾಲನೆಯೇ ಧರ್ಮ ಎಂದು ವಿವರಿಸಿದರು.
