ಉದಯವಾಹಿನಿ, ಚಂಡೀಗಢ: ದೇಶದ ಮೊದಲ ಹೈಡ್ರೋಜನ್ ರೈಲು ಜೀಂದ್‌ಗೆ ಆಗಮಿಸಿದ್ದು, ಇತಿಹಾಸದಲ್ಲಿ ಹೊಸ ಅಧ್ಯಾಯ ರಚಿಸುವತ್ತ ಸಿದ್ಧವಾಗಿದೆ. ಈ ರೈಲು ಜನವರಿ 20ರ ನಂತರ ಸೋನಿಪತ್ ಮಾರ್ಗದಲ್ಲಿ ಚಾಲನೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹೈಡ್ರೋಜನ್ ರೈಲು ಆರಂಭವಾದರೆ ಜೀಂದ್ ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ನಗರಗಳ ಸಾಲಿನಲ್ಲಿ ಸೇರ್ಪಡೆಯಾಗಲಿದೆ.
ಲಖನೌದ ಆರ್‌ಡಿಎಸ್‌ಓ (ಅನುಸಂಧಾನ ಮತ್ತು ಅಭಿವೃದ್ಧಿ ಸಂಸ್ಥೆ)ಯ ಎರಡು ತಂಡಗಳು ಜೀಂದ್‌ಗೆ ಆಗಮಿಸಿ, ರೈಲು ಮತ್ತು ಹೈಡ್ರೋಜನ್ ಘಟಕದ ಪರೀಕ್ಷೆ ನಡೆಸುತ್ತಿವೆ. ಪರೀಕ್ಷೆ ಪೂರ್ಣಗೊಂಡ ನಂತರ ರೈಲಿಗೆ ಹಸಿರು ನಿಶಾನೆ ನೀಡಲಾಗುವುದು.
ಸ್ವದೇಶಿ ತಂತ್ರಜ್ಞಾನದ ಮೇರುಕೃತಿ ಈ ರೈಲನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಬ್ರಾಡ್ ಗೇಜ್ ಮಾರ್ಗದಲ್ಲಿ ಚಲಿಸುವ ಇದು ವಿಶ್ವದ ಅತಿ ಉದ್ದದ (10 ಬೋಗಿಗಳು) ಮತ್ತು ಅತಿ ಶಕ್ತಿಶಾಲಿ (2400 ಕಿಲೋವಾಟ್) ಹೈಡ್ರೋಜನ್ ರೈಲಾಗಿದೆ. ಒಂದು ಬಾರಿಗೆ 2,500 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ರೈಲು ಗರಿಷ್ಠ 140 ಕಿಮೀ ವೇಗದಲ್ಲಿ ಚಲಿಸಲಿದೆ. 360 ಕೆಜಿ ಹೈಡ್ರೋಜನ್‌ನಿಂದ 180 ಕಿಮೀ ದೂರ ಪ್ರಯಾಣಿಸಬಲ್ಲದು. ಇದರ ವೆಚ್ಚ ಸುಮಾರು 82 ಕೋಟಿ ರೂಪಾಯಿ. ಚೆನ್ನೈಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಬೋಗಿಗಳನ್ನು ತಯಾರಿಸಲಾಗಿದೆ.
