ಉದಯವಾಹಿನಿ, ನಿರ್ದೇಶನದ ಜೊತೆಗೆ ಯೋಗರಾಜ್ ಭಟ್ ಗೀತರಚನೆಕಾರರಾಗಿಯೂ ಜನಪ್ರಿಯರು. ಈವೆರಗೂ ಸಾಕಷ್ಟು ಸೂಪರ್ ಹಿಟ್ ಚಿತ್ರಗೀತೆಗಳನ್ನು ರಚಿಸಿ ಅವರು ಕನ್ನಡಿಗರ ಮನೆ ಮಾತಾಗಿದ್ದಾರೆ. ಪ್ರಸ್ತುತ “ಅಮಲು” ಎಂಬ ಹಾಡನ್ನು ಬರೆಯುವ ಮೂಲಕ ಯೋಗರಾಜ್ ಭಟ್ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ನಟ ಶರಣ್ ಹಾಡನ್ನು ಸುಮಧುರವಾಗಿ ಹಾಡಿದ್ದಾರೆ. ಚೇತನ್ – ಡ್ಯಾವಿ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಮಹದೇವಪ್ಪ ಆರ್ ಕನಕಪುರ ನಿರ್ಮಾಣ ಮಾಡಿದ್ದಾರೆ. ಪಂಚರಂಗಿ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಆಲ್ಬಂ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿನ ಬಗ್ಗೆ ಮಾಹಿತಿ ನೀಡಲು ನಾಗರಭಾವಿಯಲ್ಲಿರುವ ಸುಂದರ ಪರಿಸರದ “ಸುಃಖ”ದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ “ಅಮಲು” ತಂಡದ ಸದಸ್ಯರು ಮಾತನಾಡಿದರು.

ಅಮಲು” ಹಾಡು ಬರೆಯಲು ನನಗೆ ಪದೇಪದೇ ಸಿಗುತ್ತಿದ್ದ ಕುಡುಕನೊಬ್ಬ ಸ್ಪೂರ್ತಿ. ಆತ ಎಷ್ಟು ಕುಡಿದರೂ ನಾನು ಕುಡಿದು ಮಾತನಾಡುತ್ತಿಲ್ಲ ಎಂದು ಹೇಳುತ್ತಿದ್ದ. ಬಹುಶಃ ಎಲ್ಲಾ ಕುಡುಕರು ಇದೇ ತರಹ ಹೇಳುತ್ತಾರೆ. ಅದೇ ವಿಷಯ ಇಟ್ಟುಕೊಂಡು ನಾನು ಈ ಹಾಡು ಬರೆದಿದ್ದೇನೆ. ಈ ಹಾಡಿನ ಬಗ್ಗೆ ಗೆಳೆಯ ಚೇತನ್ ಸೂಸ್ಕ ಅವರ ಹತ್ತಿರ ಹೇಳಿದೆ ಅವರು ತಕ್ಷಣ ಹಾಡಿಗೆ ಸಂಗೀತ ಸಂಯೋಜನೆ ಮಾಡಿದರು. ಡ್ಯಾವಿ ಅವರು ಸಹ ಚೇತನ್ ಅವರಿಗೆ ಸಂಗೀತ ಸಂಯೋಜನೆಗೆ ಸಾಥ್ ನೀಡಿದ್ದಾರೆ. ಈ ಹಾಡು ಬರೆಯಬೇಕಾದರೆ ನಾನು ಈ ಹಾಡಿಗೆ ಶರಣ್ ಅವರ ಧ್ವನಿ ಸರಿ ಹೊಂದುತ್ತದೆ ಅಂದುಕೊಂಡೆ ಬರೆದಿದ್ದು. ಶರಣ್ ಅವರಿಗೆ ಫೋನ್ ಮಾಡಿ ನೀವು ಈ ಹಾಡನ್ನು ಹಾಡಬೇಕು ಅಂತ ಹೇಳಿದ್ದೆ. ಕೂಡಲೇ ಅವರು ಒಪ್ಪಲಿಲ್ಲ. ನಾನು ಬಿಡಲಿಲ್ಲ. ಕೊನೆಗೆ ಅವರ ಧ್ವನಿಯಲ್ಲೇ “ಅಮಲು” ಹಾಡು ಸುಮಧುರವಾಗಿ ಮೂಡಿಬಂದಿದೆ. “ಖಾಲಿ ಕ್ವಾಟ್ರು ಬಾಟ್ಲಿ”, ” ಫೋನು ಇಲ್ಲ ಮೆಸೇಜ್ ಇಲ್ಲ ನಿಂದು” ಹೀಗೆ ಸಾಕಷ್ಟು ಸೂಪರ್ ಹಿಟ್ ಹಾಡುಗಳು ಶರಣ್ ಅಭಿನಯದ ಚಿತ್ರಗಳಿಗೆ ನಾನು ಬರೆದಿದ್ದೇನೆ. ನಮ್ಮಿಬ್ಬರದು ಒಂತರ ಸೂಪರ್ ಹಿಟ್ ಕಾಂಬಿನೇಶನ್. “ಅಮಲು” ಹಾಡನ್ನು ಅದ್ಭುತವಾಗಿ ಹಾಡಿರುವ ಶರಣ್ ಅವರಿಗೆ, ಸಂಗೀತ ಸಂಯೋಜನೆ ಮಾಡಿರುವ ಚೇತನ್ – ಡ್ಯಾವಿ ಹಾಗೂ ನಿರ್ಮಾಪಕರಾದ ಮಹದೇವಪ್ಪ ಆರ್ ಕನಕಪುರ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದ ಹಾಡಿನ ಗೀತರಚನೆಕಾರ ಹಾಗೂ ನಿರ್ದೇಶಕ ಯೋಗರಾಜ್ ಭಟ್, ಸದ್ಯದಲ್ಲೇ ಮತ್ತೊಂದು ಹಾಡಿನೊಂದಿಗೆ ಭೇಟಿಯಾಗುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!