ಉದಯವಾಹಿನಿ, ಮೆಕ್ಸಿಕೋ : ಕೇಂದ್ರ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ ಶುಕ್ರವಾರ ಪ್ರಬಲವಾದ ಭೂಕಂಪನ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಆಸ್ಪತ್ರೆಯೊಂದು ಹಾನಿಗೀಡಾಗಿದ್ದು, ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಮೆಕ್ಸಿಕೋದ ರಾಷ್ಟ್ರೀಯ ಭೂಕಂಪಶಾಸ್ತ್ರ ಸಂಸ್ಥೆಯ ಪ್ರಕಾರ, ರಿಕ್ಟರ್​ ಮಾಪಕದಲ್ಲಿ 6.5ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಅದರ ಕೇಂದ್ರಬಿಂದು ದಕ್ಷಿಣ ರಾಜ್ಯವಾದ ಗೆರೆರೊದ ಸ್ಯಾನ್ ಮಾರ್ಕೋಸ್ ಪಟ್ಟಣದ ಬಳಿ ಪೆಸಿಫಿಕ್ ಕರಾವಳಿ ರೆಸಾರ್ಟ್ ಅಕಾಪುಲ್ಕೊ ಬಳಿ ಕಂಡು ಬಂದಿದೆ. ಇದಾದ ಬಳಿಕ 500ಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿದೆ.
ರಾಜ್ಯದ ನಾಗರಿಕ ರಕ್ಷಣಾ ಸಂಸ್ಥೆಯು ಅಕಾಪುಲ್ಕೊ ಸುತ್ತಮುತ್ತ ಮತ್ತು ರಾಜ್ಯದ ಇತರ ಹೆದ್ದಾರಿಗಳಲ್ಲಿ ಹಲವಾರು ಭೂಕುಸಿತ ಸಂಭವಿಸಿದೆ ಎಂದು ವರದಿ ಮಾಡಿದೆ. ಭೂಕಂಪ ಸಂಭವಿಸಿದ ಕೇಂದ್ರ ಬಿಂದುವಿನ ಬಳಿ ವಾಸಿಸುತ್ತಿದ್ದ 50 ವರ್ಷದ ಮಹಿಳೆಯೊಬ್ಬರು ಮನೆ ಕುಸಿದು ಸಾವನ್ನಪ್ಪಿದ್ದಾರೆ. ಭೂಕಂಪನದಿಂದ ಗೆರೆರೊ ರಾಜಧಾನಿ ಚಿಲ್ಪಾನ್ಸಿಂಗೊದಲ್ಲಿರುವ ಆಸ್ಪತ್ರೆಯೊಂದು ಹಾನಿಗೊಂಡಿದ್ದು, ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಗೆರೆರೊ ಗವರ್ನರ್ ಎವೆಲಿನ್ ಸಲ್ಗಾಡೊ ಹೇಳಿದ್ದಾರೆ.

ಭೂಮಿ ಕಂಪಿಸುತ್ತಿದ್ದಂತೆ ಆತಂಕಗೊಂಡ ಮೆಕ್ಸಿಕೋ ನಗರ ಮತ್ತು ಅಕಾಪುಲ್ಕೊ ನಿವಾಸಿಗಳು, ಪ್ರವಾಸಿಗರು ರಸ್ತೆಗಳತ್ತ ಓಡಿದರು. ಘಟನೆ ಕುರಿತು ಮಾತನಾಡಿರುವ ಮೆಕ್ಸಿಕೋ ನಗರದ ಮೇಯರ್ ಕ್ಲಾರಾ ಬ್ರುಗಡಾ, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದರು.

ಅಕಾಪುಲ್ಕೊದಿಂದ ಈಶಾನ್ಯಕ್ಕೆ ಸುಮಾರು 57 ಮೈಲುಗಳಷ್ಟು ದೂರದ ಗೆರೆರೊದ ರಾಂಚೊ ವಿಯೆಜೊದಿಂದ 2.5 ಮೈಲುಗಳಷ್ಟು ದೂರದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಈ ಭೂಕಂಪನದ ಎಚ್ಚರಿಕೆಯಿಂದಾಗಿ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರ ಹೊಸ ವರ್ಷದ ಮೊದಲ ಪತ್ರಿಕಾಗೋಷ್ಠಿಗೆ ಅಡ್ಡಿಯುಂಟಾಗಿತ್ತು. ಭೂಕಂಪದ ಸ್ವಲ್ಪ ಸಮಯದ ನಂತರ ಶೀನ್‌ಬಾಮ್ ಪತ್ರಿಕಾಗೋಷ್ಠಿಯನ್ನು ಪುನರಾರಂಭಿಸಿದರು.

 

Leave a Reply

Your email address will not be published. Required fields are marked *

error: Content is protected !!