
ಉದಯವಾಹಿನಿ, ಇಸ್ಲಾಮಾಬಾದ್ : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಿದ್ದು ‘ನಾನೇ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಲೂ ಹೇಳಿಕೊಳ್ಳುತ್ತಿದ್ದಾರೆ. ಇದೀಗ, ನೆರೆಯ ರಾಷ್ಟ್ರ ಚೀನಾ ಇದರಲ್ಲಿ ತನ್ನದೂ ಪಾತ್ರವಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ.ಈ ಹಿಂದೆ, ಅಮೆರಿಕ ಅಧ್ಯಕ್ಷರ ಮಾತಿಗೆ ವಿಧಿಯಿಲ್ಲದೆ ತಲೆ ಆಡಿಸಿದ್ದ ಪಾಕಿಸ್ತಾನ ಇದೀಗ, ಚೀನಾ ಊದಿದ ಪುಂಗಿಗೂ ತಲೆದೂಗಿದೆ. ಭಾರತದೊಂದಿಗಿನ ಸಂಘರ್ಷ ಶಮನದಲ್ಲಿ ಚೀನಾದ ಪಾತ್ರವಿದೆ. ಶಾಂತಿಗಾಗಿ ರಾಜತಾಂತ್ರಿಕ ಮಾತುಕತೆ ನಡೆಸಿತ್ತು ಎಂದು ಪಾಕಿಸ್ತಾನ, ಚೀನಾದ ಹೇಳಿಕೆಯನ್ನು ಬೆಂಬಲಿಸಿದೆ.ಚೀನಾ ಮಧ್ಯಸ್ಥಿಕೆ ವಹಿಸಿದ್ದು ಹೌದು-ಪಾಕ್ ವಕ್ತಾರ: ಈ ಬಗ್ಗೆ ಹೇಳಿಕೆ ನೀಡಿರುವ ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಅಂದ್ರಾಬಿ, “ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಭಾರತದೊಂದಿಗಿನ ಸಂಘರ್ಷವನ್ನು ಶಮನಗೊಳಿಸುವಲ್ಲಿ ಬೀಜಿಂಗ್ ಪಾತ್ರ ವಹಿಸಿದೆ ಎಂಬ ಚೀನಾದ ಹೇಳಿಕೆಯನ್ನು ಪಾಕಿಸ್ತಾನ ಬೆಂಬಲಿಸುತ್ತದೆ. ಇದು ಅಂತಾರಾಷ್ಟ್ರೀಯ ಪ್ರಯತ್ನಗಳ ಭಾಗವಾಗಿದ್ದ ಶಾಂತಿಗಾಗಿ ರಾಜತಾಂತ್ರಿಕತೆ” ಎಂದು ಕರೆದಿದ್ದಾರೆ.
“ಚೀನಾದ ನಾಯಕತ್ವವು ಪಾಕಿಸ್ತಾನದ ನಾಯಕತ್ವದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಭಾರತ- ಪಾಕಿಸ್ತಾನದ ನಡುವೆ ಸಂಘರ್ಷ ನಡೆದ ಮೇ 6 ರಿಂದ 10 ರವರೆಗಿನ ಆ ಮೂರು-ನಾಲ್ಕು ದಿನಗಳಲ್ಲಿ ಅಥವಾ ಅದಕ್ಕೂ ಮೊದಲು ಮತ್ತು ನಂತರ ಭಾರತ ಸರ್ಕಾರದ ಜೊತೆ ಸಂಘರ್ಷ ನಿಲುಗಡೆಗೆ ಚೀನಾ ಮಾತುಕತೆ ನಡೆಸಿದೆ” ಎಂದು ತಾಹಿರ್ ಅಂದ್ರಾಬಿ ಹೇಳಿದ್ದಾರೆ.
