ಉದಯವಾಹಿನಿ, ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರು ಚೀನಾ ಅಧ್ಯಕ್ಷಷಿ ಜಿನ್‌ಪಿಂಗ್ ಅವರೊಂದಿಗಿನ ಮಹತ್ವದ ಶೃಂಗಸಭೆಗಾಗಿ ಚೀನಾಗೆ ತೆರಳುವ ಕೆಲವೇ ಗಂಟೆಗಳ ಮೊದಲು, ಉತ್ತರ ಕೊರಿಯಾ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಪರ್ಯಾಯ ದ್ವೀಪದಲ್ಲಿ ಯುದ್ಧದ ಭೀತಿ ಮೂಡಿಸಿದೆ.
ಭಾನುವಾರ ಮುಂಜಾನೆ ಸುಮಾರು 7.50ರ ಸುಮಾರಿಗೆ ಉತ್ತರ ಕೊರಿಯಾದ ರಾಜಧಾನಿ ಪೊಂಗ್ಯಾಂಗ್‌ನಿಂದ ಪೂರ್ವ ಕರಾವಳಿಯ ಸಮುದ್ರದ ಕಡೆಗೆ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ದೃಢಪಡಿಸಿದ್ದಾರೆ. ಈ ಕ್ಷಿಪಣಿಗಳ ನಿಖರತೆ ಮತ್ತು ಅವು ಕ್ರಮಿಸಿದ ದೂರದ ಬಗ್ಗೆ ಮಿಲಿಟರಿ ತಜ್ಞರು ಈಗ ವಿಶ್ಲೇಷಣೆ ನಡೆಸುತ್ತಿದ್ದಾರೆ.
ಉತ್ತರ ಕೊರಿಯಾದ ಆಡಳಿತಾರೂಢ ‘ವರ್ಕಸ್್ರ ಪಾರ್ಟಿ ಶೀಘ್ರದಲ್ಲೇ ತನ್ನ ಅತ್ಯುನ್ನತ ಸಭೆಯಾದ ‘ಗ್ರಾಂಡ್ ಕಾಂಗ್ರೆಸ್‌ ಅನ್ನು ನಡೆಸಲಿದೆ. ಈ ಸಭೆಗೂ ಮುನ್ನ ತನ್ನ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿಗೆ ಮತ್ತು ಸ್ವದೇಶಿ ಜನರಿಗೆ ಪ್ರದರ್ಶಿಸುವುದು ಕಿಮ್ ಜಾಂಗ್ ಉನ್ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ. ಈ ಪರೀಕ್ಷೆಯ ಮೂಲಕ ದಕ್ಷಿಣ ಕೊರಿಯಾ ಮತ್ತು ಚೀನಾ ಎರಡಕ್ಕೂ ತನ್ನ ಮಿಲಿಟರಿ ಉಪಸ್ಥಿತಿಯ ಬಗ್ಗೆ ಕಿಮ್ ಬಲವಾದ ಎಚ್ಚರಿಕೆ ರವಾನಿಸಿದ್ದಾರೆ.
ಕ್ಷಿಪಣಿ ಪರೀಕ್ಷೆಗೂ ಮುನ್ನ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿದ್ದ ಕಿಮ್ ಜಾಂಗ್ ಉನ್, ಯುದ್ಧತಂತ್ರದ ಮಾರ್ಗದರ್ಶಿ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಈಗ ಇರುವುದಕ್ಕಿಂತ ಎರಡು ಪಟ್ಟು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಕ್ಷಿಪಣಿ ಉಡಾವಣೆ ನಡೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!