ಉದಯವಾಹಿನಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಭಾರತೀಯ ಸೇನೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಇದೆ ವೇಳೆ ಉಗ್ರರನ್ನು ಬೆಂಬಲಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಏತನ್ಮಧ್ಯೆ, ಒಂದು ಪ್ರಮುಖ ಸಂಗತಿ ಬಹಿರಂಗವಾಗಿದೆ. ಅದೇನಪ್ಪಾ ಅಂದರೆ ಲಷ್ಕರ್-ಎ-ತೈಬಾ ಪಾಕಿಸ್ತಾನದಲ್ಲಿ ಜಲ ಭಯೋತ್ಪಾದನಾ ಜಾಲವನ್ನು ನಿರ್ವಹಿಸುತ್ತಿದೆ ಎಂದು ವರದಿಯಾಗಿರುವುದು.
ಹೌದು, ಈಗ ಗುಪ್ತಚರ ವರದಿಯ ಪ್ರಕಾರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ ಮತ್ತು ಅದರ ಅಂಗಸಂಸ್ಥೆಯಾದ ಜೆಕೆಯುಎಂ ದೇಶಾದ್ಯಂತ ಸಮಗ್ರ ಮತ್ತು ಸಂಘಟಿತ ಜಲ ಭಯೋತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿವೆ ಎನ್ನಲಾಗಿದೆ. ವರದಿಯ ಪ್ರಕಾರ, ಈ ಜಾಲವನ್ನು ಒಳನುಸುಳುವಿಕೆ ಮತ್ತು ಸಮುದ್ರ ಭಯೋತ್ಪಾದಕ ದಾಳಿಗೆ ನಿರ್ದಿಷ್ಟವಾಗಿ ಸಿದ್ಧಪಡಿಸಲಾಗುತ್ತಿದೆ.

ಗುಪ್ತಚರ ಮೂಲಗಳ ಪ್ರಕಾರ ಲಷ್ಕರ್ ಈಗ ಏಷ್ಯಾದ ಯಾವುದೇ ಭಯೋತ್ಪಾದಕ ಸಂಘಟನೆಗಿಂತ ಹೆಚ್ಚು ತರಬೇತಿ ಪಡೆದ ಸ್ಕೂಬಾ ಡೈವರ್‌ಗಳು ಮತ್ತು ವೃತ್ತಿಪರ ಈಜುಗಾರರನ್ನು ಹೊಂದಿದ್ದು.ಪಾಕಿಸ್ತಾನದ ಹಲವಾರು ಪ್ರಮುಖ ನಗರಗಳಲ್ಲಿ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ನೀರು ಆಧಾರಿತ ತರಬೇತಿ ಶಿಬಿರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ಭದ್ರತಾ ಸಂಸ್ಥೆಗಳ ಗಮನ ಸೆಳೆಯುವುದನ್ನು ತಪ್ಪಿಸಲು ನಕಲಿ ಜಲ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ನೆಪದಲ್ಲಿ ಈಜು ಮತ್ತು ನೀರೊಳಗಿನ ಕೋರ್ಸ್‌ಗಳನ್ನು ಬಹಿರಂಗವಾಗಿ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಈ ತರಬೇತಿ ಸ್ಥಳಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ವೇಗದ ದೋಣಿಗಳು ಮತ್ತು ಅತ್ಯಾಧುನಿಕ ಮತ್ತು ದುಬಾರಿ ಸ್ಕೂಬಾ ಉಪಕರಣಗಳನ್ನು ಬಳಸಲಾಗುತ್ತಿದೆ.

 

Leave a Reply

Your email address will not be published. Required fields are marked *

error: Content is protected !!