ಉದಯವಾಹಿನಿ, ಚೆನ್ನೈ: ಪೊಂಗಲ್ ಹಬ್ಬದ ಪ್ರಯುಕ್ತ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ಮತ್ತು ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ತಲಾ 3,000 ರೂ. ನಗದು ಉಡುಗೊರೆ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸ್ಟಾಲಿನ್ ತಮ್ಮ ಜನರಿಗೆ ಈ ಉಡುಗೊರೆ ಘೋಷಣೆ ಮಾಡಿದ್ದಾರೆ. ತಮಿಳುನಾಡಿನ ಪ್ರಮುಖ ಹಬ್ಬವಾಗಿರುವ ʻಪೊಂಗಲ್ʼ 3 ದಿನ ಆಚರಿಸಲಾಗುತ್ತದೆ.
ಹೀಗಾಗಿ ಜನವರಿ 15 ರಂದು ಬರುವ ಹಬ್ಬದ ದಿನ 2 ಕೋಟಿಗೂ ಅಧಿಕ ಅಕ್ಕಿ ಪಡಿತರ ಚೀಟಿದಾರರಿಗೆ 3,000 ರೂಪಾಯಿಗಳ ನಗದು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ. ಆದಾಯ ತೆರಿಗೆ ಪಾವತಿದಾರರು ಹಾಗೂ ಕೇಂದ್ರ ಮತ್ತು ಸರ್ಕಾರಿ ನೌಕರರು, ಸಾರ್ವಜನಿಕ ಉದ್ಯೋಗಿಗಳನ್ನು ಹೊರತುಪಡಿಸಿ ಇನ್ನುಳಿದ 2.22 ಕೋಟಿ ಪಡಿತ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ‘ಪೊಂಗಲ್ ಉಡುಗೊರೆ’ಯಾಗಿ 3,000 ಹಣ ನೀಡುವುದಾಗಿ ತಿಳಿಸಿದ್ದಾರೆ. 6,900 ಕೋಟಿ ರೂ. ಹೊರೆ ಜೊತೆಗೆ ಕಬ್ಬು, ತಲಾ ಒಂದು ಕೆ.ಜಿ ಅಕ್ಕಿ, ತುಪ್ಪ ಹಾಗೂ ಸಕ್ಕರೆ ಒಳಗೊಂಡಿರುವ ಪೊಂಗಲ್ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ. ಇದರ ಜೊತೆಗೆ ಪಡಿತರರಿಗೆ ಉಚಿತ ಪಂಚೆ ಮತ್ತು ಸೀರೆಯು ನೀಡಲಾಗುತ್ತದೆ. ಈ ಬೃಹತ್ ಯೋಜನೆಯಿಂದಾಗಿ ತಮಿಳುನಾಡು ರಾಜ್ಯದ ಬೊಕ್ಕಸಕ್ಕೆ 6,900 ಕೋಟಿ ರೂಪಾಯಿಗೂ ಅಧಿಕ ಹೊರೆ ಬೀಳಲಿದೆ ಎಂದು ಎಂ.ಕೆ ಸ್ಟಾಲಿನ್ ಅವರು ಹೇಳಿಕೊಂಡಿದ್ದಾರೆ.
